ಬೆಂಗಳೂರು: ಹಿರಿಯ ಪತ್ರಕರ್ತ, ಕಾದಂಬರಿಕಾರ, 'ಹಾಯ್ ಬೆಂಗಳೂರು' ಸಂಪಾದಕ, ಅತ್ಯುತ್ತಮ ವಾಗ್ಮಿ ರವಿ ಬೆಳಗೆರೆ ಅವರ ನಿಧನ ಕನ್ನಡ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಸ್ಟಾರ್ ಬರಹಗಾರರಾಗಿ ಗುರುತಿಸಿಕೊಂಡಿದ್ದ ಬೆಳೆಗೆರೆ ಅವರ ಉಸಿರು ನಿಂತರೂ, ಅವರ ಅಕ್ಷರಗಳು ಎಂದಿಗೂ ಅಜರಾಮರ. ಅವರಿಗೆ ನನ್ನ ಅಂತಿಮ ನಮನಗಳು ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದರು ಈಶ್ವರ್ ಖಂಡ್ರೆ ಸಂತಾಪ:ಹಿರಿಯ ಪತ್ರಕರ್ತ, ಲೇಖಕ, ಹಾಯ್ ಬೆಂಗಳೂರ್ ಸಂಸ್ಥಾಪಕ ಸಂಪಾದಕ ರವಿ ಬೆಳಗೆರೆ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಂಬನಿ ಮಿಡಿದಿದ್ದಾರೆ. ರವಿ ಬೆಳಗೆರೆ ಅವರ ಅಗಲಿಕೆ ಕನ್ನಡ ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ,ಅವರ ಕುಟುಂಬ,ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ದೊರಕಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಎಂ.ಬಿ.ಪಾಟೀಲ್ ಸಂತಾಪ: ಜನಪ್ರಿಯ ಪತ್ರಕರ್ತರಾದ ಶ್ರೀ ರವಿ ಬೆಳಗೆರೆ ಅವರ ನಿಧನದ ಸುದ್ದಿ ಕೇಳಿ ಅತೀವ ನೋವುಂಟಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ತಮ್ಮ ಬರವಣಿಗೆಯಿಂದಲೇ ಅಸಂಖ್ಯ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿದಂತಹ ಸಾಧನೆ ಸ್ತುತ್ಯಾರ್ಹ. ಭಗವಂತನು ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸಲೀಂ ಅಹ್ಮದ್ ಸಂತಾಪ: ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕರು ಹಾಗೂ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರ ನಿಧನ ನೋವು ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬರವಣಿಗೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಅವರು ಪತ್ರಿಕೋದ್ಯಮಕ್ಕೆ ಹೊಸ ರಂಗು ತಂದಿದ್ದರು. ಅವರ ಅಗಲುವಿಕೆ ಕನ್ನಡ ಮಾಧ್ಯಮ ಲೋಕಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ, ಅಭಿಮಾನಿ ಬಳಗಕ್ಕೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.