ಬೆಂಗಳೂರು: ಭಾಲ್ಕಿ ಮಾಜಿ ಶಾಸಕ ಡಾ. ವಿಜಯಕುಮಾರ್ ಖಂಡ್ರೆ ಅವರ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಹೈದರಾಬಾದ್ನ ಖಾಸಗಿ ಸನ್ ಶೈನ್ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ವಿಜಯಕುಮಾರ್ ಖಂಡ್ರೆ ನಿಧನ ಹೊಂದಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಭಾಲ್ಕಿಯಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಡಾ. ವಿಜಯಕುಮಾರ್ ಖಂಡ್ರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರ ಹಿರಿಯ ಸಹೋದರ. 1989ರಲ್ಲಿ ಪಕ್ಷೇತರ ಶಾಸಕರಾಗಿದ್ದರು. ನಂತರ 1994ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.
ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಕೆಪಿಸಿಸಿ:
ಭಾಲ್ಕಿ ಮಾಜಿ ಶಾಸಕ ಡಾ. ವಿಜಯಕುಮಾರ ಖಂಡ್ರೆಯವರು ಇಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ. ಡಾ. ವಿಜಯಕುಮಾರ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರ ಹಿರಿಯ ಸಹೋದರ. ಎರಡು ಬಾರಿ ಶಾಸಕರಾಗಿದ್ದರು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರು ಹಾಗೂ ಬಂಧು ಮಿತ್ರರ ದುಃಖದಲ್ಲಿ ನಾವೂ ಭಾಗಿಯಾಗುತ್ತೇವೆ ಎಂದು ಕೆಪಿಸಿಸಿ ಅಧಿಕೃತ ಟ್ವಿಟರ್ ಖಾತೆ ಮೂಲಕ ಸಂತಾಪ ಸೂಚಿಸಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಹಲವು ನಾಯಕರು ವಿಜಯಕುಮಾರ್ ಖಂಡ್ರೆ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.