ಬೆಂಗಳೂರು: ಅನಾರೋಗ್ಯದಿಂದ ನಿಧನರಾದ ನಟ ಸತ್ಯಜಿತ್ಗೆ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮಾಜಿ ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸತ್ಯಜಿತ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸಿದ್ದಾರೆ.
ಸಂಸದ ಡಿ.ಕೆ ಸುರೇಶ್ ಸಹ ಟ್ವೀಟ್ ಮಾಡಿ ಸತ್ಯಜಿತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಕುಟುಂಬ ಮತ್ತು ಬಂಧುಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಟ ಸತ್ಯಜಿತ್ ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ಕನ್ನಡದ ಬಹುಬೇಡಿಕೆಯ ಪೋಷಕ ನಟ ಸತ್ಯಜಿತ್ ನಿಧನರಾದ ಸಂಗತಿ ಅಪಾರ ನೋವು ತಂದಿದೆ. ಸುಮಾರು 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸತ್ಯಜಿತ್ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಸತ್ಯಜಿತ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಆದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಟ್ವೀಟ್ ಮಾಡಿದ್ದು, ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ, ಖಳ ನಟನಾಗಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಹಿರಿಯ ನಟ ಸತ್ಯಜಿತ್ ಅವರ ಆತ್ಮಕ್ಕೆ ಸದ್ಗತಿ ಲಭಿಸಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಸಂತಾಪ:
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಬಹುಬೇಡಿಕೆಯ ಪೋಷಕ ನಟನಾಗಿದ್ದ ನಟ ಸತ್ಯಜಿತ್ ‘ಅರುಣ ರಾಗ’, ‘ಅಂತಿಮ ತೀರ್ಪು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ಉಪ್ಪಿ 2’-ಹೀಗೆ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟ ಸತ್ಯಜಿತ್ ಪೋಷಕ ಪಾತ್ರ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚು ಗಮನ ಸೆಳೆದಿದ್ದರು ಎಂದು ಸ್ಮರಿಸಿದ್ದಾರೆ.
ಮೃತರ ಕುಟುಂಬ, ಬಂಧುಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅವರ ನಿಧನಕ್ಕೆ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಖಳನಾಯಕ, ಪೋಷಕನಟ ಸೇರಿದಂತೆ ವೈವಿಧ್ಯಮಯ ಪಾತ್ರಗಳಲ್ಲಿ 600 ಕ್ಕೂ ಹೆಚ್ಷು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ತಮ್ಮ ನಟನೆಯ ಮೂಲಕ ಜನರ ಹೃದಯವನ್ನು ಗೆದ್ದಿದ್ದರು. ತಮ್ಮ ಕಲಾಸೇವೆಯಿಂದಾಗಿ ಅವರ ಹೆಸರು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿರುತ್ತದೆ ಎಂದಿದ್ದಾರೆ.