ಬೆಂಗಳೂರು: ಕೇರಳ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ಅವರು ಮಂಗಳವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮಂಗಳವಾರ ರಾಜ್ಯಕ್ಕೆ ಆಗಮಿಸಿರುವ ಅವರು ವಿವಿಧ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇವರ ಭೇಟಿ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಸಿದ್ದರಾಮಯ್ಯನವರ ಭೇಟಿ ಬಳಿಕ ತಾರೀಖ್ ಅನ್ವರ್ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದಾರೆ. ಇಬ್ಬರೂ ನಾಯಕರ ಭೇಟಿ ಸಂದರ್ಭ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕೇರಳದಲ್ಲಿ ಸಂಘಟಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ : ತೆನೆ ಇಳಿಸಿ ಕಾಂಗ್ರೆಸ್ ಸೇರಲು ಎಸ್‌ಆರ್‌ಶ್ರೀ ಪೀಠಿಕೆ.. HDK ಬಿಜೆಪಿ ಸಖ್ಯ ಬೆಳೆಸಿದ್ರೆ ಗುಬ್ಬಿ ಶಾಸಕ JDSಗೆ ಗುಡ್‌ಬೈ!!
ಹಿಂದೆ ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ತಳಮಟ್ಟದಿಂದ ಕೇರಳದಲ್ಲಿ ಸಂಘಟಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಕರ್ನಾಟಕದ ಪಕ್ಕದ ರಾಜ್ಯವೇ ಆಗಿರುವ ಕೇರಳಕ್ಕೆ ಉಸ್ತುವಾರಿಗಳನ್ನು ನೇಮಿಸಿ ಎಐಸಿಸಿ ನಿನ್ನೆ ಆದೇಶ ಹೊರಡಿಸಿದೆ. ಅಧಿಕಾರ ವಹಿಸಿಕೊಳ್ಳುವ ಮುನ್ನವೇ ವಿವಿಧ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕುವ ಕಾರ್ಯಕ್ಕೆ ತಾರೀಖ್ ಅನ್ವರ್ ಮುಂದಾಗಿದ್ದಾರೆ.
ವಿಶೇಷವಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಅವರನ್ನು ಕೂಡ ಕೇರಳ ರಾಜ್ಯದ ಪಕ್ಷ ಸಂಘಟನೆ ಜವಾಬ್ದಾರಿಗೆ ನೇಮಕ ಮಾಡಲಾಗಿದೆ. ಈ ಹಿನ್ನೆಲೆ ಅಕ್ಕ-ಪಕ್ಕದ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಕೂಡ ಇವರ ಭೇಟಿ ಮಹತ್ವ ಪಡೆದುಕೊಂಡಿತ್ತು.