ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೋವಾ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಎರಡು ದಿನಗಳ ಕಾಲ ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಲ ಪ್ರಚಾರ ನಡೆಸಲಿದ್ದಾರೆ. ಮಂಗಳವಾರ ಗೋವಾ ತೆರಳಲಿರುವ ಸಿದ್ದರಾಮಯ್ಯ ಮರಮಗಾವ್, ವಾಸ್ಕೋ, ದಾಬೊಲಿಮ್, ಕಾರ್ತಲಿಮ್ನಲ್ಲಿ ಪ್ರಚಾರ ನಡೆಸಲಿದ್ದಾರೆ. ಬುಧವಾರ ಚುನಾವಣಾ ವೀಕ್ಷಕರ ಸಭೆಯಲ್ಲೂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇದಾದ ಬಳಿಕ ಇದೀಗ ಸಿದ್ದರಾಮಯ್ಯ ಕೂಡಾ ಗೋವಾಗೆ ತೆರಳಿ ಕಾಂಗ್ರೆಸ್ ಪರ ಕ್ಯಾಂಪೇನ್ ನಡೆಸಲಿದ್ದಾರೆ.
ಓದಿ: ಭಾರತೀಯ ಸಂವಿಧಾನದಲ್ಲಿ ಹಿಂದುತ್ವದ ಪ್ರತಿಬಿಂಬ: ಮೋಹನ್ ಭಾಗವತ್
ಗೋವಾದಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪೈಕಿ ಸಿದ್ಧರಾಮಯ್ಯ ಕೂಡಾ ಒಬ್ಬರಾಗಿದ್ದಾರೆ. ಕರ್ನಾಟಕದಿಂದ ಎಚ್. ಕೆ. ಪಾಟೀಲ್, ಎಂ. ಬಿ. ಪಾಟೀಲ್, ಆರ್. ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ, ಬಿ. ವಿ. ಶ್ರೀನಿವಾಸ್ ಸೇರಿದಂತೆ ಪ್ರಮುಖ ನಾಯಕರು ಸಹ ಪ್ರಚಾರ ನಡೆಸಲಿದ್ದಾರೆ.
ಫೆಬ್ರವರಿ 14ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 301 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದ ವಿವಿಧ ನಾಯಕರನ್ನು ಕರೆತಂದು ವಿಧಾನಸಭಾವಾರು ಉಸ್ತುವಾರಿ ನೀಡಿ ಪ್ರಚಾರ ಮಾಡಲಾಗುತ್ತಿದೆ. ಗೋವಾದಲ್ಲಿ ವಲಸೆ ಕನ್ನಡಿಗರು ಹೆಚ್ಚಿದ್ದು, ಅವರನ್ನು ಸೆಳೆಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.