ಬೆಂಗಳೂರು: ಕೆಟ್ಟ ರೀತಿಯ ಹಿಂದುತ್ವ ಅನುಸರಿಸುವ ವ್ಯಕ್ತಿಗೆ ಬಿಜೆಪಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ನಡಿಗೆ ಮತದಾರರ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನಂತ್ಕುಮಾರ್ ಪತ್ನಿಗೆ ಟಿಕೆಟ್ ನೀಡಬಹುದಿತ್ತು. ಅನಂತ್ಕುಮಾರ್ ದೇಶಕ್ಕೆ ಸಾಕಷ್ಟು ಸೇವೆ ಮಾಡಿದ್ದಾರೆ. ಅವರ ಪತ್ನಿಗೆ ನೀಡಿದ್ದರೆ ಮಹಿಳೆಗೆ ಟಿಕೆಟ್ ನೀಡಿದಂತಾಗುತ್ತಿತ್ತು. ಆದರೆ, ಅದೆಲ್ಲ ಬಿಟ್ಟು ಯಾರೋ ಒಬ್ಬರಿಗೆ ಕೊಟ್ಟಿದ್ದಾರೆ. ತೇಜಸ್ವಿ ಸೂರ್ಯ ಭೂಗತವಾಗಿ ಶಸ್ತ್ರಾಸ್ತ್ರ ತಯಾರು ಮಾಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂತಹ ಅಭ್ಯರ್ಥಿ ಅವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಮಂಡ್ಯದಲ್ಲಿ ಅಂಬರೀಶ್ ಪತ್ನಿ ಸುಮಲತಾಗೆ ಬೆಂಬಲ ನೀಡಿದ್ದಾರೆ. ಆದರೆ, ಇತ್ತ ಬೆಂ. ದಕ್ಷಿಣದಲ್ಲಿ ನಿಮ್ಮದೇ ಪಕ್ಷದ ಮಹಿಳೆಯನ್ನು ಬೆಂಬಲಿಸಿಲ್ಲ ಏಕೆ? ತೇಜಸ್ವಿನಿ ಅನಂತ್ಕುಮಾರ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಆದರೆ, ಅದನ್ನು ಬಿಟ್ಟು ಅನಂತ್ಕುಮಾರ್ ಹೆಗಡೆ ತಮ್ಮನಂತಿರುವ ತೇಜಸ್ವಿ ಸೂರ್ಯ ಎಂಬ ಯುವಕನಿಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ಕುಮಾರ್ ಹೆಗಡೆ ವಿರುದ್ಧ 36 ಕ್ರಿಮಿನಲ್ ಪ್ರಕರಣಗಳಿವೆ. ನನಗೆ ಮುಸ್ಲಿಂ, ಕ್ರೈಸ್ತರ ಮತ ಬೇಡ, ಕೈ ಕಡಿಯುವ ಪ್ರಚೋದನಕಾರಿ ಹೇಳಿಕೆ ನೀಡುವ ವ್ಯಕ್ತಿ ಆತ. ನನಗೆ ಹಿಂದೂಗಳ ಮತ ಮಾತ್ರ ಸಾಕು ಎಂದು ಹೇಳುವಾತ. ಹೀಗಾಗಿ ದೇಶ ಯಾವ ಪರಿಸ್ಥಿತಿಗೆ ಹೋಗುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದರು.