ಬೆಂಗಳೂರು: ಆಸೆ ಆಮಿಷಗಳಿಗೆ ಮರಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿಗೆ ಹೋಗಿದ್ದಾರೆ. ಇದು ಆಪರೇಷನ್ ಕಮಲದ ಮೂಲಕವೇ ಹೊರಟ್ಟಿ ಕಮಲಕ್ಕೆ ಸೇರಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ರಕ್ಷಣೆ ಮಾಡುವ ಪೀಠದಲ್ಲಿ ಕೂತು, ಸಂವಿಧಾನ ಬುಡಮೇಲು ಮಾಡುವ ಬಿಜೆಪಿ ಜೊತೆಗೆ ಸೇರಿದ್ದಾರೆ. ಹೊರಟ್ಟಿ ಅವರು ಇತ್ತೀಚಿಗೆ ಬಿಜೆಪಿಯ ಅಮಿತ್ ಶಾ ಭೇಟಿಯಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎಂದು ಘೋಷಿಸಿದ್ದಾರೆ. ಸಾಂವಿಧಾನಿಕ ಪೀಠದಲ್ಲಿದ್ದು, ಬಿಜೆಪಿ ಸೇರ್ಪಡೆಯ ಮಾತು ಸಂವಿಧಾನ ಸಭಾಪತಿ ಮತ್ತು ಸಭಾಪತಿ ಪೀಠಕ್ಕೆ ಮಾಡಿದ ಅಪಚಾರ ಎಂದು ಕಿಡಿಕಾರಿದರು.
ತತ್ವ - ಸಿದ್ದಾಂತಗಳನ್ನು ಒಪ್ಪಿ ಯಾರು ಬೇಕಾದರೂ ಯಾವುದೇ ಪಕ್ಷ ಸೇರಬಹುದು. ಆದರೆ, ಸಾಂವಿಧಾನಿಕ ಪೀಠದಲ್ಲಿರುವವರು ನಡೆದುಕೊಳ್ಳುವ ರೀತಿ ಇದಲ್ಲ. ಹೊರಟ್ಟಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ನಡೆದುಕೊಳ್ಳದೇ ಕಾಯ್ದೆ ಉಲ್ಲಂಘಿಸಿದ್ದಾರೆ. ಸಂವಿಧಾನದ ಮೂಲಕ ಭಾರತ ನಡೆಯುತ್ತಿದೆ. ಹೊರತು ಪಂಚಾಂಗದಡಿಯಲ್ಲ. ಸಾಂವಿಧಾನಿಕ ಪೀಠಕ್ಕೆ ಅವಮಾನ ಮಾಡಿರುವ ಅವರು ಕೂಡಲೇ ರಾಜೀನಾಮೆ ನೀಡಬೇಕು. ಬಿಜೆಪಿಯವರ ದಂಡಂ - ದಶಂಗುಣಂಗೆ ಹೆದರಿ ಹೋಗುತ್ತಿರಬಹುದು. ಅವರು ಹರಕೆಯ ಕುರಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಸಚಿವರಿಗೆ ಮೊದಲು ನೋಟಿಸ್ ಕೊಡಿ: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಡುವ ಬದಲು ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರಿಗೆ ಮೊದಲು ನೊಟೀಸ್ ಕೊಡಲಿ. ಈ ಹಗಣದರಲ್ಲಿ ಸಚಿವರ ಹೆಸರೇ ಇದೆ. ಬಂಧಿತ ಬಿಜೆಪಿ ನಾಯಕಿ ದಿವ್ಯಾ ಮನೆಗೆ ಗೃಹ ಸಚಿವರೇ ಹೋಗಿರಲಿಲ್ವೇ?. ಇದೆಲ್ಲವೂ ಏನು ಹೇಳುತ್ತೆ ಗೊತ್ತಿಲ್ವೇ ಎಂದು ವಾಗ್ದಾಳಿ ನಡೆಸಿದರು.
ಇದು 300 ಕೋಟಿ ರೂ. ಹಗರಣವಾಗಿದೆ. ಚುನಾವಣೆ ಹಣಕ್ಕಾಗಿ ಇದೆಲ್ಲ ಮಾಡಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ನಕಲಿ ಗಾಂಧಿ ಅಣ್ಣಾ ಹಜಾರೆಗೆ ಕಾಣುತ್ತಿಲ್ಲವೇ?. ಅವರು ಎಲ್ಲಿ ಮಲಗಿದ್ದಾರೆ ಗೊತ್ತಿಲ್ಲ?. ಕಿರಣ್ ಬೇಡಿ ಎಲ್ಲಿದ್ದಾರೋ ಗೊತ್ತಿಲ್ಲ. ಇಷ್ಟೆಲ್ಲಾ ಹಗರಣವಾದರೂ ಏನ್ ಮಾಡುತ್ತಿದ್ಧಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವಮಾನವ: ಡಿಕೆಶಿ