ಬೆಂಗಳೂರು: ಸಚಿವ ಸಂಪುಟ ಸೇರ್ಪಡೆಯಾಗಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ರಾಜ್ಯ ಕಾಂಗ್ರೆಸ್‌ನ ಹಿರಿಯ ಶಾಸಕರ ಸಭೆ ಕರೆದು ಸಮಾಧಾನ ಪಡಿಸಲು ನಿರ್ಧರಿಸಲಾಗಿದೆ.
ಮುಂದಿನ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಅತೃಪ್ತ ಕಾಂಗ್ರೆಸ್ ನಾಯಕರ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಸಚಿವ ಸ್ಥಾನ ಸಿಗದೇ ಬೇಸರಗೊಂಡಿರುವ ನಾಯಕರನ್ನು ಕರೆದು ಮಾತನಾಡಿಸುವ, ಸಮಾಧಾನಪಡಿಸುವ ಕಾರ್ಯ ಇಲ್ಲಾಗಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಹಿರಿಯ ಶಾಸಕರಾದ ಹೆಚ್.ಕೆ. ಪಾಟೀಲ್, ರಾಮಲಿಂಗರೆಡ್ಡಿ, ರೋಷನ್ ಬೇಗ್, ಬಿ.ಸಿ. ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಒಂದೆಡೆ ಸೇರಿಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಪ್ರತಿಯೊಬ್ಬ ನಾಯಕರೂ ತಮ್ಮ ನೋವು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಅದನ್ನು ತಡೆಯುವುದು ಹಿರಿಯ ನಾಯಕರ ಕರ್ತವ್ಯ. ಹೈಕಮಾಂಡ್ ಸೂಚನೆ ಮೇರೆಗೆ ಸಭೆ ಕರೆದು ಅವರಿಗೆ ಮಾರ್ಗದರ್ಶನ ನೀಡುವ ಮತ್ತು ಅಹವಾಲು ಸ್ವೀಕರಿಸುವ ಹಾಗೂ ಮುಂದಿನ ಸಚಿವ ಸಂಪುಟ ಪುನರಚನೆ ಸಂದರ್ಭದಲ್ಲಿ ಅವಕಾಶ ಕಲ್ಪಿಸುವ ಸಂಬಂಧ ಮಾತುಕತೆ ನಡೆಸಿ ಭರವಸೆ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂದಿನ ಡಿಸೆಂಬರ್ಗೆ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರ್ಣಗೊಳ್ಳಲಿದೆ. ಆ ವೇಳೆಗೆ ಸ್ಪಷ್ಟ ಚಿತ್ರಣ ಪಡೆದು ಯಾವ್ಯಾವ ಅತೃಪ್ತರಿಗೆ ಮಣೆ ಹಾಕುವುದು ಸೂಕ್ತ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಜ್ಯ ಕಾಂಗ್ರೆಸ್ ಪ್ರಮುಖರು ನಿರ್ಧರಿಸಿದ್ದಾರೆ. ಹಲವು ಹಂತದ ಸಭೆಗಳು, ಹಲವು ಸ್ಥರಗಳಲ್ಲಿ ನಡೆಯಲಿದೆ. ಇದರಲ್ಲಿ ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವ ಸಭೆ ಬಹುಬೇಗ ನಡೆಯಲಿದೆ ಎನ್ನುವ ಮಾಹಿತಿ ಇದೆ. ಸದ್ಯ ಹೆಚ್.ಕೆ. ಪಾಟೀಲ್, ಬಿ.ಸಿ. ಪಾಟೀಲ್, ರಾಮಲಿಂಗಾ ರೆಡ್ಡಿ ಮತ್ತಿತರ ನಾಯಕರು ಪಕ್ಷಕ್ಕೆ ಮುಜುಗರ ತರಿಸುವ ಮಾತನ್ನಾ ಡುತ್ತಿದ್ದು, ಆದಷ್ಟು ಬೇಗ ಇವರ ಬಾಯಿ ಮುಚ್ಚಿಸಿ, ಪಕ್ಷದಲ್ಲಿ ಗೊಂದಲವಿಲ್ಲ ಎಂದು ತೋರಿಸುವ ಬಗ್ಗೆ ಪ್ರಯತ್ನ ನಡೆಯುತ್ತಿದೆ.