ಬೆಂಗಳೂರು: ಕಾಂಗ್ರೆಸ್ನವರು ಅಶ್ವತ್ಥ ನಾರಾಯಣ ಅವರ ಮೇಲಿನ ಹೊಟ್ಟೆ ಉರಿಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅಶ್ವತ್ಥ ನಾರಾಯಣ ಅವರು ಮಂತ್ರಿಯಾಗಿ ಬೆಳೆಯುತ್ತಿದ್ದಾರೆ. ಸಮಾಜದಲ್ಲಿ ಬೆಳೆಯುತ್ತಿರುವುದರ ಜೊತೆಗೆ ಒಳ್ಳೆ ಕೆಲಸಗಳನ್ನೂ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ನವರು ಸಹಿಸದೇ ಈ ತರಹದ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಪಿ ಸಿ ಮೋಹನ್ ಕಿಡಿ ಕಾರಿದ್ದಾರೆ.
ಚಿಲುಮೆ ಡೇಟಾ ಸಂಗ್ರಹ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ಮಾಡುವ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಏನೇ ಲೋಪ ದೋಷ ಇದ್ದರು ಖಂಡಿತವಾಗಿಯೂ ಸಿಎಂ ಕ್ರಮ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಬೆಂಗಳೂರಿನಲ್ಲಿ ಬಹಳಷ್ಟು ಜನ ಹೊರ ಜಿಲ್ಲೆಗಳಿಂದ ಬಂದಿದ್ದಾರೆ.
ಇಲ್ಲಿ ಬಂದವರು ಬಾಡಿಗೆ ಮನೆಗಳಲ್ಲಿ ವಾಸ ಮಾಡಿ ಏರಿಯಾಗಳನ್ನು ಬದಲಾಯಿಸಿರುತ್ತಾರೆ. ಇವತ್ತು ಮಹಾದೇವಪುರದಲ್ಲಿರುತ್ತಾರೆ, ನಾಳೆ ರಾಜಾಜಿನಗರದಲ್ಲಿರುತ್ತಾರೆ. ಎಲ್ಲಿ ಕೆಲಸ ಸಿಗುತ್ತೋ ಅಲ್ಲಿಗೆ ಹೋಗುತ್ತಾರೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ರದ್ದಾಗುವುದು ಸಹಜ ಎಂದು ಸಮಜಾಯಿಷಿ ನೀಡಿದರು.
ನಾನೂ ಕೂಡ ಎಂಟು ಚುನಾವಣೆ ಕಂಡಿದ್ದೇನೆ. ಹೀಗಾಗಿ ವೋಟರ್ ಲಿಸ್ಟ್ ಪರಿಶೀಲಿಸಿದಾಗ ವ್ಯತ್ಯಾಸಗಳು ಕಾಣಿಸುತ್ತವೆ. ಜನ ಶಿಫ್ಟ್ ಆಗುತ್ತಿರುತ್ತಾರೆ. ಆಗ ಅವರ ಹೆಸರು ಡಿಲಿಟ್ ಮಾಡುತ್ತಾರೆ. ನಂತರ ಬೇರೊಂದು ಕಡೆ ಸೇರ್ಪಡೆಯನ್ನೂ ಮಾಡಿರುತ್ತಾರೆ. ಈ ಥರ ಮಾಡಿರೋದರಲ್ಲಿ ತಪ್ಪಿಲ್ಲ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಕ್ರಮ ಸೇರ್ಪಡೆ: ಎನ್ ಆರ್ ರಮೇಶ್