ಬೆಂಗಳೂರು: ಗ್ಯಾರಂಟಿಗಳ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ರೇಸ್ ಕೋರ್ಸ್ನ ಶಕ್ತಿ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಂದ ಖರ್ಚು, ವೆಚ್ಚ, ರೂಪುರೇಷೆ, ಅಂಕಿಅಂಶದ ಕುರಿತು ಅವರು ಮಾಹಿತಿ ಪಡೆದರು. ಹಣಕಾಸು ಇಲಾಖೆ ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ಕ್ರೋಢೀಕರಣ ಹೇಗೆ ಎಂಬ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದೆ.
ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ 3,000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆ.ಜಿ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಈಗಾಗಲೇ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಆದೇಶಿಸಲಾಗಿದೆ.
ಈ ಬಗ್ಗೆ ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಸದ್ಯ ವಾರ್ಷಿಕ 50,000 ಕೋಟಿ ರೂ. ಗ್ಯಾರಂಟಿಗಳಿಗಾಗಿ ಹಣ ಬೇಕಾಗಿದೆ. ಈ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬುಧವಾರ ಎಲ್ಲ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನವಾಗಲಿದೆ ಎಂದು ತಿಳಿದುಬಂದಿದೆ.
ಗೃಹ ಜ್ಯೋತಿಗೆ ₹12,038 ಕೋಟಿ ಹೊರೆ: ಪ್ರಮುಖವಾಗಿ ಸಭೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ವಿಸ್ತೃತವಾಗಿ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು. ಅಧಿಕಾರಿಗಳು ನೀಡಿದ ಅಂಕಿಅಂಶದಂತೆ 200 ಯೂನಿಟ್ ಫ್ರೀ ವಿದ್ಯುತ್ ಯೋಜನೆಯಿಂದ ಅಂದಾಜು 2.14 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ವಾರ್ಷಿಕ ಬಳಕೆ ಅಂದಾಜು 13,575 ಮಿಲಿಯನ್ ಯೂನಿಟ್ ಆಗಲಿದೆ. ನಿಗದಿತ ಶುಲ್ಕ , ತೆರಿಗೆ ಇತ್ಯಾದಿಗಳನ್ನು ಸೇರಿದಂತೆ ಯೋಜನೆಗಾಗಿ ಅಗತ್ಯವಿರುವ ಒಟ್ಟು ಬಿಲ್ಗಳು ವಾರ್ಷಿಕ 12,038 ಕೋಟಿ ರೂ. ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನು ಬಿಪಿಎಲ್ ಕುಟುಂಬಕ್ಕೆ ಅನ್ವಯಿಸುವ ಬಗ್ಗೆನೂ ಚರ್ಚೆ ನಡೆದಿದೆ. ಆದರೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ 32,000 ಕೋಟಿ: ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್ನ ಮತ್ತೊಂದು ಗ್ಯಾರಂಟಿ ಸ್ಕೀಂ. ಇಂದು ನಡೆದ ಸಭೆಯಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು ಗೃಹ ಲಕ್ಷ್ಮಿ ಯೋಜನೆಗೆ ವಾರ್ಷಿಕ ಅಂದಾಜು 32,000 ಕೋಟಿ ರೂ. ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯನ್ನು ಎಲ್ಲರಿಗೂ ಅನ್ವಯಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ. ಹಾಗಾಗಿ ಬಿಪಿಎಲ್ ಕುಟುಂಬದ ಮನೆಯೊಡತಿಗೆ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡುವ ಬಗ್ಗೆನೂ ಚರ್ಚೆ ನಡೆಸಲಾಗಿದೆ. ಕೆಲ ಷರತ್ತು ಹಾಕಿ ಯೋಜನೆ ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಯುವ ನಿಧಿ ಯೋಜನೆಗೆ 900 ಕೋಟಿ ಹೊರೆ: ಪದವೀಧರರಿಗೆ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ನೀಡುವ ಯುವನಿಧಿ ಯೋಜನೆಗೆ ವಾರ್ಷಿಕ 860-900 ಕೋಟಿ ರೂ. ಹೊರೆಯಾಗಲಿದೆ ಎಂದು ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ. 2023 ಪಾಸ್ ಔಟ್ ಆದ ವಿದ್ಯಾರ್ಥಿಗಳಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಪ್ರತಿ ವರ್ಷ ಸುಮಾರು 4.50 ಲಕ್ಷ ಪದವೀಧರರು ಕಾಲೇಜುಗಳಿಂದ ಉತ್ತೀರ್ಣರಾಗಿ ಹೊರಬಂದರೆ, ಡಿಪ್ಲೊಮಾ ವಿದ್ಯಾರ್ಥಿಗಳು ಅಂದಾಜು 48,000 ಪಾಸ್ ಔಟ್ ಆಗುತ್ತಿದ್ದಾರೆ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದ್ದಾರೆ. ಆ ಮೂಲಕ ಅಂದಾಜು 860-900 ಕೋಟಿ ರೂ. ಬೊಕ್ಕಸಕ್ಕೆ ಹೊರೆ ಬೀಳಲಿದೆ ಎಂದು ಅಂಕಿಅಂಶ ನೀಡಿದ್ದಾರೆ
ಉಚಿತ ಬಸ್ ಪ್ರಯಾಣಕ್ಕೆ 3,600 ಕೋಟಿ ವೆಚ್ಚ: ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಸ್ತೆ ಸಾರಿಗೆ ನಿಗಮಗಳ ಮೇಲೆ ವಾರ್ಷಿಕ ಒಟ್ಟು ಅಂದಾಜು 3,600 ಕೋಟಿ ರೂ. ಹೊರೆ ಬೀಳಲಿದೆ ಎಂದು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಯೋಜನೆ ಕೇವಲ ಸಾಮಾನ್ಯ ಸಾರಿಗೆ ಬಸ್ಗಳಿಗೆ ಮಾತ್ರ ಅನ್ವಯವಾಗಲಿದೆ. ಅದರಂತೆ 3,600 ಕೋಟಿ ರೂ. ಹೊರೆ ಬೀಳಲಿದೆ. ಈ ಸಂಬಂಧವೂ ಕೆಲ ನಿಬಂಧನೆಗಳನ್ನು ಹಾಕುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅನ್ನಭಾಗ್ಯಕ್ಕೆ 5,000 ಕೋಟಿ ರೂ. ಬೇಕು: ಅನ್ನಭಾಗ್ಯ ಯೋಜನೆಗೆ ವಾರ್ಷಿಕ ಅಂದಾಜು ಸುಮಾರು 4,500-5,000 ಕೋಟಿ ರೂ. ವೆಚ್ಚವಾಗುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆ ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಅನ್ವಯವಾಗಲಿದೆ. ಅದರಂತೆ ರಾಜ್ಯದಲ್ಲಿ ಸುಮಾರು 1.27 ಕೋಟಿ ಬಿಪಿಎಲ್ ಕಾರ್ಡ್ ದಾರರು ಇದ್ದಾರೆ ಎಂದು ಹೇಳಲಾಗಿದೆ.
ಹಣಕಾಸು ಇಲಾಖೆಯ ಅಸಹಾಯಕತೆ: ಐದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 50,000 ಕೋಟಿ ರೂ. ಆಗಲಿದೆ ಎಂದು ಸಿಎಂ ಸಚಿವಾಲಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹಣಕಾಸು ಹೊಂದಿಸುವ ಬಗ್ಗೆ ಹಣಕಾಸು ಇಲಾಖೆ ಅಸಹಾಯಕತೆ ವ್ಯಕ್ತಪಡಿಸಿದೆ. ಸಭೆಯಲ್ಲಿ ಸಂಬಂಧಿತ ಇಲಾಖೆಗಳಿಂದ ಐದು ಗ್ಯಾರಂಟಿ ಯೋಜನೆಗೆ ತಗುಲುವ ಅಂದಾಜು ವೆಚ್ಚದ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಆದರೆ ಈ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಹೇಗೆ, ಹಣ ಹೊಂದಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇವಲ ಎರಡು ಮೂರು ಸಾವಿರ ಕೋಟಿ ರೂ. ಅಂದರೆ ಹೊಂದಿಸಬಹುದು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದ್ದು, ಯಾವ ರೀತಿ ಮಾಡುವುದು ಎಂಬ ಬಗ್ಗೆನೇ ಹಣಕಾಸು ಇಲಾಖೆ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಐದು ಗ್ಯಾರಂಟಿಗಳಿಗೆ ತಗುಲುವ ಹೊರೆಯ ಬಗ್ಗೆ, ಗ್ಯಾರಂಟಿಗಳಿಗೆ ಇಷ್ಟೊಂದು ಹಣ ಹೊಂದಿಸುವ ಬಗ್ಗೆ ನಮಗಂತೂ ಯಾವುದೇ ಮಾರ್ಗ ಕಾಣುತ್ತಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಾವುದೇ ಡಿನೋಟಿಫಿಕೇಷನ್ ಮಾಡುವಂತಿಲ್ಲ: ಬಿಡಿಎ ಅಧಿಕಾರಿಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್ ತಾಕೀತು