ಬೆಂಗಳೂರು: ''ಹೊಳೆ ದಾಟಿದ ಮೇಲೆ ಅಂಬಿಗನ ಹಂಗು ಯಾಕೆ? ಎಂಬ ನಿಲುವು ತಾಳಿದ್ದಾರೆ ಸಿದ್ದರಾಮಯ್ಯ'' ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ''ನಿಮ್ಮದು ಗ್ಯಾರಂಟಿ ಸರ್ಕಾರ ಅಲ್ಲ. 420 ಸರ್ಕಾರ ಎಂದು ಜನ ವಾಟ್ಸಪ್ನಲ್ಲಿ ಹರಿಬಿಡೋಕೆ ಶುರು ಮಾಡಿದ್ದಾರೆ. ಎಲ್ಲಾ ದುಡ್ಡು ನೀಡಿ, ಮತ ಹಾಕಿಸಿಕೊಳ್ಳುತ್ತಿರುವ ಆರೋಪ ಇತ್ತು. ಆದರೆ, ಈ ಬಾರಿ ಕಾಂಗ್ರೆಸ್ ಸಾಲದ ಕಾರ್ಡ್ ನೀಡಿ ಮತ ಹಾಕಿಸಿಕೊಂಡಿದೆ. ನಿಮ್ಮನ್ನು ನೋಡಿ ಕಲಿಯಬೇಕು ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗೆ ವ್ಯಂಗ್ಯವಾಡಿದ್ದಾರೆ.
ನಾಳೆ ಉಚಿತ ಬಸ್ ಪ್ರಯಾಣ ಚಾಲನೆ ಕೊಡುವ ಹಾಗೆ, ಅಲ್ಲೇ ಪಕ್ಕದಲ್ಲಿ ಇರುವ ರಿಕ್ಷಾ ಸ್ಟಾಂಡ್ಗೂ ಹೋಗಿ ಬನ್ನಿ ಸಿದ್ದರಾಮಯ್ಯನವರೇ, ಅವರ ಕಷ್ಟವನ್ನೂ ಕೇಳಿ ಬನ್ನಿ. ಅವರಿಗೂ ಅನೇಕ ಆಶ್ವಾಸನೆ ನೀಡಿದ್ದರು. ಅವರು ಹೇಳ್ತಾ ಇದ್ದಾರೆ. ನಮಗೆ ತೊಂದರೆ ಆಗಿದೆ ಅಂತ. ಹೀಗಾಗಿ ರಿಕ್ಷಾದವರನ್ನು ಮಾತಾಡಿಸಿ ಬನ್ನಿ ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರಕಾರ ಜನರ ದಾರಿ ತಪ್ಪಿಸುತ್ತಿದೆ. ಐದು ಗ್ಯಾರಂಟಿ ನೀಡಿ, ಮತ ಗಳಿಸಿ, ಈಗ ಕಂಡೀಶನ್ ಹಾಕಿ ಜನರ ಕೆರಳಿಸುವ ಕೆಲಸ ಮಾಡ್ತಾ ಇದ್ದಾರೆ. ನಾಳೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಬಸ್ ಫ್ರೀಗೆ ಸಿಎಂ ಚಾಲನೆ ಕೊಡ್ತಾರೆ. ಮಹಿಳೆಯರು ಖುಷಿ ಆಗಿರಬಹುದು ಸಂತೋಷ. ಕೆಲಸ ಮಾಡೋಕೆ ಹೋಗುವವರಿಗೆ ಅನುಕೂಲ. ಆದರೆ, ಮನೆಯಲ್ಲಿ ಕುಳಿತ ಮಹಿಳೆಯೂ ಬಸ್ ಫ್ರೀ ಎಂದು ಎಲ್ಲಾದರೂ ಎದ್ದು ಹೊರಟರೆ, ಗಂಡ ಹೆಂಡತಿ ಜಗಳ ಮಾಡಿಕೊಳ್ಳದೇ ಇದ್ರೆ ಸಾಕು ಎಂದರು.
ಕಾಂಗ್ರೆಸ್ನವರು ವಿದ್ಯುತ್ ಫ್ರೀ ಎಂದ್ರು. ಈಗ ಸರಾಸರಿ ಲೆಕ್ಕ ಹಾಕ್ತಾ ಇದ್ದಾರೆ. ಸರಾಸರಿ ಲೆಕ್ಕದ ಪ್ರಕಾರ ಐದು ವರ್ಷ ಗ್ರಾಹಕ ಒಂದು ಯುನಿಟ್ ಜಾಸ್ತಿ ಬಳಸುವಂತಿಲ್ಲ. ಬಳಸಿದರೆ ವಿದ್ಯುತ್ ಫ್ರೀ ಸಿಗುವುದಿಲ್ಲ. ಎಲ್ಲಾ ಫ್ರೀಗಳು ಅಂತ ಹೇಳಿದವರು ಇದೀಗ ಕಂಡೀಷನ್ ಹಾಕ್ತಾಯಿದ್ದೀರಲ್ಲ. 200 ಯೂನಿಟ್ ಫ್ರೀ ಅಂದವರು 70 ಯೂನಿಟ್ ಉಪಯೋಗಿಸ್ತಿದ್ರೆ 10% ಮಾತ್ರ ಕೊಡುತ್ತೇವೆ ಅಂದಿದ್ದಾರೆ. ಐದು ವರ್ಷ ಅಷ್ಟರಲ್ಲಿಯೇ ಇರಬೇಕು ಈ ಸರ್ಕಾರ. ಇಲ್ಲ ಅಂದ್ರೆ ವಿಶ್ವಾಸ ಕಳೆದುಕೊಳ್ಳುತ್ತದೆ. ಮೋಸ ವಂಚನೆ ಮಾಡುವ ಸರ್ಕಾರ. ಹೀಗೆ ನಾನು ಹೇಳ್ತಿಲ್ಲ ಎಲ್ಲಕಡೆ ಜನ ಮಾತನಾಡುತ್ತಿದ್ದಾರೆ. ಇದು ಗ್ಯಾರಂಟಿ ಸರ್ಕಾರ ಅಲ್ಲ 420 ಸರ್ಕಾರ ಎಂದು ವಾಗ್ದಾಳಿ ನಡೆಸಿದ್ರು.
ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಕಡಿಮೆ ಸಮಾನರೇ- ಕೋಟ ಶ್ರೀನಿವಾಸ ಪೂಜಾರಿ: ಎಲ್ಲ ಧರ್ಮ, ಸಮುದಾಯಗಳು ಸಮಾನ ಎನ್ನುವ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಕಡಿಮೆ ಸಮಾನ ಆಗುವುದು ಹೇಗೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದ ಅವರು, ಹಿಂದೂ, ಮುಸ್ಲಿಮರು, ಕ್ರೈಸ್ತರು, ಪಾರ್ಸಿ, ಜೈನರನ್ನು ಸಮಾನವಾಗಿ ನೋಡುವುದಾಗಿ ಹೇಳುವ ಸರ್ಕಾರ ತಾರತಮ್ಯ ಧೋರಣೆ ಹೊಂದಿರಬಾರದು. ಸಂಘ ಪರಿವಾರದವರಿಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎನ್ನುವ ಸರ್ಕಾರದ ಧೋರಣೆ ಹೇಗೆ ಸರಿಯಾಗುತ್ತದೆ? ಹಾಗಿದ್ದರೆ ಹಿಂದೂಗಳು ಕಡಿಮೆ ಸಮಾನರೇ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಅಕ್ರಮಗಳ ಕುರಿತ ತನಿಖೆಯನ್ನು ರಾಜ್ಯ ಸರ್ಕಾರ ತಮ್ಮ ಇಲಾಖೆಯಿಂದಲೇ ಆರಂಭಿಸಲಿ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರಿಗೆ ಶೇ 15ರ ಬದಲಾಗಿ ಶೇ 17ರಷ್ಟು ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ. ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ ಶೇ 7ಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಜಿಜ್ಞಾಸೆಗಳು ಇರಬಹುದು. ಆದರೆ, ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು ಎಂಬ ಕಾರಣಕ್ಕಾಗಿ ಒಳ ಮೀಸಲಾತಿಯನ್ನು ನಮ್ಮ ಪಕ್ಷ ಪ್ರಕಟಿಸಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ಪಕ್ಷ ನಮ್ಮದು ಎಂದು ತಿಳಿಸಿದರು.
ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ವಿಚಾರದ ಪ್ರತಿಪಾದನೆ, ಭಾಷಣ ಮಾಡುವುದು ಬೇರೆ. ಹೆಸರನ್ನು ಘೋಷಣೆ ಮಾಡುವುದು ಬೇರೆ. ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಜಗತ್ತಿನ ಎಲ್ಲ ಸ್ಥಳಗಳನ್ನು ಅಭಿವೃದ್ಧಿ ಮಾಡಿದ್ದು ನರೇಂದ್ರ ಮೋದಿಜಿ ಅವರ ಸರ್ಕಾರ. ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಬಿಜೆಪಿ ವಿರೋಧಿಸುತ್ತದೆ. ಬಾಂಬ್ ಹಾಕುವವರ ಜೊತೆ, ದೇಶವಿರೋಧಿ ಘೋಷಣೆ ಕೂಗುವವರ ಜೊತೆ ನಮ್ಮ ರಾಜ್ಯ ಇಲ್ಲ. ಪಾಕಿಸ್ತಾನಕ್ಕೆ ಜಯವಾಗಲಿ ಎನ್ನುವವರ ಜೊತೆ ನಮ್ಮ ರಾಜ್ಯ ಇಲ್ಲ. ಭಯೋತ್ಪಾದಕತೆಯನ್ನು ಬಿಜೆಪಿ ವಿರೋಧಿಸುತ್ತದೆ ಎಂದರು.