ಬೆಂಗಳೂರು: ರಾಜ್ಯ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ 24 ಗಂಟೆಗಳ ನಂತರ ಕೊನೆಗೂ ಕಾಂಗ್ರೆಸ್ ಉತ್ತರ ಕೊಟ್ಟಿದೆ. ಕುಮಾರಸ್ವಾಮಿ ಅವರೇ ಆಡಳಿತ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸ್ವಯಂ ಸೇರುವುದಕ್ಕೂ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಆಪರೇಷನ್ ಕಮಲದ ಮೂಲಕ ಚುನಾಯಿತ ಸರ್ಕಾರವನ್ನು ಕೆಡವುದಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲದಷ್ಟು ಅತಿ ಮುಗ್ದರಾಗಿ ಬಿಟ್ಟಿರಾ? ಎಂದು ನವಿರಾಗೇ ತಿರುಗೇಟು ಕೊಟ್ಟಿದೆ.
ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತು ಅಧಿಕಾರ ನಡೆಸುವಾಗ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದೆ ಎನಿಸಿತ್ತು. ಅಧಿಕಾರ ಇಲ್ಲದಿದ್ದಾಗ ನೈತಿಕತೆ ಬಗ್ಗೆ ಪ್ರಶ್ನೆ ಬರುತ್ತದೆಯೇ?. ರಾಜ್ಯ ಸಂಕಷ್ಟದಲ್ಲಿರುವಾಗ ಅದೃಶ್ಯರು ಅಪ್ರಸ್ತುತರು ಆಗಿರುವ ನಿಮ್ಮ ಪಕ್ಷದ ನೈತಿಕತೆ ಏನು? ಎಂದು ಪ್ರಶ್ನಿಸಿದೆ.
ನಿನ್ನೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ "ಪ್ರಜಾಪ್ರಭುತ್ವ ಉಳಿಸಿ" ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ ಬಿಎಸ್ಪಿಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ? ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು. ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವದ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು?. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ? ಎಂದು ಕೇಳಿದ್ದರು.
ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ 'ಅಪರಾಧಿ'ಗಳೇ ಎಂದಿದ್ದರು.
ಈ ಹೇಳಿಕೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಎರಡು ದಿನಗಳ ಹಿಂದೆ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದರು. ಕೊನೆಗೂ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿ ಹೇಳಿಕೆಗೆ ತನ್ನ ಪ್ರತಿಕ್ರಿಯೆ ನೀಡಿದೆ.