ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ಯಾರಿಗೆ ನೀಡಬೇಕೆಂಬ ಚರ್ಚೆ ದೇಶಾದ್ಯಂತ ಬಿರುಸುಗೊಂಡಿರುವ ಮಧ್ಯೆ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಶೀಘ್ರವೇ ರಾಜ್ಯಸಭೆಯಲ್ಲಿ ಸಹ ಸಂಖ್ಯಾಬಲ ಕೊರತೆ ಎದುರಾಗಲಿದೆ.
ಜಿ-23 ನಾಯಕರು ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಮತ್ತೊಂದು ಗುಂಪು ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕೆಂದು ಒತ್ತಡ ಹೇರುತ್ತಿದೆ.
ಆದರೆ, ಈ ಭರಾಟೆಯ ನಡುವೆ ರಾಜ್ಯಸಭೆಯಲ್ಲಿಯೂ ತಮ್ಮ ಸಂಖ್ಯಾಬಲ ಕುಸಿತವಾಗುತ್ತಿರುವುದು ಆತಂಕದ ಸಂಗತಿ. ಒಂದು ಸಂದರ್ಭದಲ್ಲಿ ದೇಶಾದ್ಯಂತ ತನ್ನ ಅಧಿಕಾರದ ಮೂಲಕ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ರಾಜ್ಯಭಾರ ನಡೆಸಿದ್ದ ಕಾಂಗ್ರೆಸ್ ಕೇವಲ 7 - 8 ವರ್ಷದಲ್ಲಿ ಒಂದು ಪ್ರಾದೇಶಿಕ ಪಕ್ಷಕ್ಕಿಂತ ಕಡಿಮೆ ಸಾಧನೆ ತೋರಿಸುವ ಮಟ್ಟ ತಲುಪಿದೆ.
ಛತ್ತೀಸ್‍ಗಢ ಹಾಗೂ ರಾಜಸ್ತಾನ ಹೊರತು ಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಸ್ವಂತ ಬಲದ ಮೇಲೆ ಸರ್ಕಾರ ಹೊಂದಿರದ ಕಾಂಗ್ರೆಸ್ ಪಕ್ಷ ನಿಧಾನವಾಗಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ತಮ್ಮ ಸದಸ್ಯ ಬಲ ಕಳೆದುಕೊಳ್ಳುತ್ತಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಲು ಮುಂಬರುವ ತಿಂಗಳುಗಳಲ್ಲಿ ರಾಜ್ಯಸಭೆಯಲ್ಲಿ ಅದರ ಸಂಖ್ಯೆಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಈ ವರ್ಷ ಮೇಲ್ಮನೆಯಲ್ಲಿ 48 ಸ್ಥಾನ ಖಾಲಿಯಾಗುವುದರೊಂದಿಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆಯು ಸಾರ್ವಕಾಲಿಕ ಕನಿಷ್ಠ 26ಕ್ಕೆ ಕುಸಿಯಲಿದೆ. ಪಂಜಾಬ್‌ನಲ್ಲಿ ಭಾರಿ ಗೆಲುವಿನ ನಂತರ, ಎಎಪಿ 10 ಸದಸ್ಯರೊಂದಿಗೆ ರಾಜ್ಯಸಭೆಯಲ್ಲಿ ನಾಲ್ಕನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.
ದೆಹಲಿಯಿಂದ 3 ಮತ್ತು ಪಂಜಾಬ್‌ನಿಂದ 7 ಸದಸ್ಯರನ್ನು ರಾಜ್ಯಸಭೆಗೆ ಕಳಿಸಿಕೊಳ್ಳುವ ಬಲ ಆಮ್ ಆದ್ಮಿ ಪಕ್ಷಕ್ಕೆ ಬಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಂತರ ಇದು ದೊಡ್ಡ ಪಕ್ಷವಾಗಿ ರಾಜ್ಯಸಭೆಯಲ್ಲಿ ಹೊರಹೊಮ್ಮಲಿದೆ.
ಕಾಂಗ್ರೆಸ್ ಪಕ್ಷ ಇದೇ ಸಂದರ್ಭ ಪಂಜಾಬ್‌ನಿಂದ 3, ಅಸ್ಸೋಂನಿಂದ 2, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ತಲಾ ಒಂದು ರಾಜ್ಯಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಈ ರೀತಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪ್ರಾಬಲ್ಯ ಕುಸಿಯುತ್ತಿದ್ದು, ಈ ಬಗ್ಗೆ ಚಿಂತನೆ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಸಮಸ್ಯೆ ಎದುರಾಗಿರುವುದು ನಿಜಕ್ಕೂ ದುರಂತ.
ಆತ್ಮಾವಲೋಕನದಲ್ಲಿ ರಾಹುಲ್ ಹೆಸರು: ಪಂಚರಾಜ್ಯ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಕರೆದಿದ್ದ, ಆತ್ಮಾವಲೋಕನ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತೆ ರಾಷ್ಟ್ರೀಯ ಅಧ್ಯಕ್ಷರಾಗಬೇಕೆಂಬ ಕೂಗು ಕೇಳಿ ಬಂದಿದೆ. ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಕಾಂಗ್ರೆಸ್‍ಗೆ ಸದ್ಯ ರಾಹುಲ್ ಒಬ್ಬರೇ ಸಾರಥಿಯಾಗಲು ಸಾಧ್ಯ. ಇವರಿಂದ ಪಕ್ಷಕ್ಕೆ ಉನ್ನತಿ ಸಿಗಲಿದೆ ಎಂದು ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದು, ಇದಕ್ಕೆ ಸಾಕಷ್ಟು ನಾಯಕರಿಂದ ಅನುಮೋದನೆ ಸಹ ಸಿಕ್ಕಿದೆ.
ಆದರೆ, ಜಿ-23 ನಾಯಕರ ತೀರ್ಮಾನ ಬೇರೆ ಇದ್ದು, ಇದಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ರಾಜೀನಾಮೆಗೆ ಮೂವರು ಸಿದ್ಧ ಎಂದಿದ್ದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ: ಆದರೆ...