ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಮೂವರು ಬಿಬಿಎಂಪಿ ಸದಸ್ಯರನ್ನು ಕಾಂಗ್ರೆಸ್ ಪಕ್ಷ ಇಂದು ಉಚ್ಛಾಟಿಸಿದೆ.
ಯಶವಂತಪುರ ಕ್ಷೇತ್ರ ಉಪಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿದ್ದು, ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಪಿ. ನಾಗರಾಜ್ ಅವರ ಪರ ಪ್ರಚಾರ ಮಾಡುವ ಬದಲು, ಕಾಂಗ್ರೆಸ್ನಿಂದ ಅನರ್ಹರಾಗಿ ಇದೀಗ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್.ಟಿ. ಸೋಮಶೇಖರ್ ಪರ ಬಹಿರಂಗವಾಗಿ ಪ್ರಚಾರ ನಡೆಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
![Congress ejected three members of BBMP](https://etvbharatimages.akamaized.net/etvbharat/prod-images/kn-bng-04-congress-corporator-dismissed-script-9020923_26112019135821_2611f_1574756901_669.jpg)
ಅಲ್ಲದೆ, ಇವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿವುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೇರೋಹಳ್ಳಿ ವಾರ್ಡ್ ಸಂಖ್ಯೆ 72ರ ಸದಸ್ಯ ರಾಜಣ್ಣ, ಹೆಮ್ಮಿಗೆಪುರ ವಾರ್ಡ್ ನಂ. 198 ಸದಸ್ಯ ಆರ್ಯ ಶ್ರೀನಿವಾಸ್, ಬೊಮ್ಮನಹಳ್ಳಿಯ ಬಿಳೆಕಹಳ್ಳಿ ಬ್ಲಾಕ್ ಕಾಂಗ್ರೆಸ್ ಸದಸ್ಯ ಹಾಗೂ ಬಿಬಿಎಂಪಿ ಸದಸ್ಯ ಪಟೇಲ್ ರಾಜು ಅವರು ಉಚ್ಛಾಟನೆಗೊಂಡವರು.
ಪಕ್ಷದ ಶಿಸ್ತುಕ್ರಮ ಉಲ್ಲಂಘಿಸಿದ ಹಿನ್ನೆಲೆ ಕೆಪಿಸಿಸಿಗೆ ಬಂದ ದೂರಿನ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.