ಬೆಂಗಳೂರು: ಶಾಸಕ ಜಮೀರ್ ಅಹಮದ್ ಅವರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷ ಹೇಳಿದ್ದಕ್ಕಿಂತ ಹೆಚ್ಚು ಸಹಾಯ ಸಹಕಾರ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶಂಸಿಸಿದ್ದಾರೆ. ಚಾಮರಾಜಪೇಟೆಯ ಜೆ.ಜೆ.ನಗರದಲ್ಲಿ ಬಿಬಿಎಂಪಿ ಪೌರ ಕಾರ್ಮಿಕರಿಗೆ 10 ಕೆಜಿ ಅಕ್ಕಿ ಒಳಗೊಂಡಂತೆ 11 ವಿಧದ ಆಹಾರದ ಕಿಟ್ ಹಾಗೂ 2 ಸಾವಿರ ರೂ. ಆರ್ಥಿಕ ಸಹಕಾರ ವಿತರಿಸಿ ಅವರು ಮಾತನಾಡಿದರು.
ಕೊರೊನಾ ವೇಳೆ ಜನಸಾಮಾನ್ಯರು ಸಂಕಷ್ಟದಲ್ಲಿದ್ದು, ಸಹಾಯ ಮಾಡುವಂತೆ ನಮ್ಮ ಶಾಸಕರಿಗೆ ಹೇಳಿದ್ದೇವೆ. ಹಾಗಾಗಿ ನಮ್ಮ ಶಾಸಕರೆಲ್ಲ ಸಹಾಯ ಮಾಡ್ತಿದ್ದಾರೆ. ಈ ಕ್ಷೇತ್ರದಲ್ಲಿ ಅಂತಹ ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯ ಹೆಚ್ಚಿನದಾಗಿ ನಡೆಯುತ್ತಿದೆ. ರಕ್ತದಲ್ಲಿ ಯಾವ ಜಾತಿ, ಧರ್ಮ ಇರಲ್ಲ. ರಕ್ತ ಬೇಕಾದಾಗ ಎಲ್ಲರೂ ಪಡೆಯುತ್ತಾರೆ. ಮುಸ್ಲಿಂರ ರಕ್ತವನ್ನೂ ಪಡೆದುಕೊಳ್ತಾರೆ. ಜೀವ ಉಳಿದ ನಂತರ ಜಾತಿ, ಧರ್ಮ ಅಂತ ಭೇದಭಾವ ಮಾಡ್ತಾರೆ. ನಮ್ಮದು ಕೇವಲ ಅಧಿಕಾರಕ್ಕೋಸ್ಕರ ಇರುವ ಪಕ್ಷ ಅಲ್ಲ. ಅಧಿಕಾರ ಇರಲಿ ಇಲ್ಲದಿರಲಿ, ಎಲ್ಲ ಧರ್ಮದ ಎಲ್ಲ ಜಾತಿಯ ಬಡವರಿಗೆ ಸಮಾನವಾಗಿ ಕಾಣಬೇಕು, ಅವರಿಗೆ ಆರ್ಥಿಕ ಸಹಕಾರ ನೀಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಈ ವೇಳೆ ಶಾಸಕ ಜಮೀರ್ ಅಹಮದ್, ಮಾಜಿ ಶಾಸಕರಾದ ಅಶೋಕ್ ಪಟ್ಟಣ್, ಪ್ರಕಾಶ್ ರಾಥೋಡ್ ಸ್ಥಳೀಯ ಕಾಂಗ್ರೆಸ್ ನಾಯಕರು ಬಿಬಿಎಂಪಿ ಮಾಜಿ ಸದಸ್ಯರು ಪಾಲ್ಗೊಂಡಿದ್ದರು.
ಚೆಕ್ ವಿತರಣೆ ಕಾರ್ಯಕ್ರಮ:
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ನಾಲ್ಕು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ನಿಂದ 10 ಸಾವಿರಕ್ಕೂ ಹೆಚ್ಚು ಮಂದಿಗೆ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಸ್ಪತ್ರೆಯಲ್ಲಿ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನ ಕ್ಯೂ ನಿಲ್ಲುವಂತೆ ಮಾಡಿದೆ ಎಂದರು.
ನೋಟು ರದ್ದು ಮಾಡಿ, ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ಕ್ಯೂ ನಿಲ್ಲಿಸಿ ಸಾಯಿಸಿದರು. ನಂತರ ಆಧಾರ್ ಜೋಡಣೆ ವಿಚಾರವಾಗಿ ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ದೇಶಕ್ಕೆ ಮಹಾಮಾರಿ ಕರೆತಂದು, ಆಸ್ಪತ್ರೆ ಮುಂದೆ ಕ್ಯೂ, ಆಂಬುಲೆನ್ಸ್ಗೂ ಕ್ಯೂ, ಔಷಧಿಗೂ ಕ್ಯೂ, ಆಕ್ಸಿಜನ್ಗೂ ಕ್ಯೂ, ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ಈಗ ಆಹಾರ ಕಿಟ್ ಕೊಡಲು ನಾವು ನಿಮ್ಮನ್ನು ಕ್ಯೂ ನಿಲ್ಲಿಸಿದ್ದೇವೆ. ಇದು ಸರ್ಕಾರದ ಆಹಾರ ಕಿಟ್ ಅಲ್ಲ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದಿಂದ ಸಂಪಾದಿಸಿದ ಸ್ವಂತ ಹಣದಲ್ಲಿ ನೀಡುತ್ತಿರುವ ಕಿಟ್. ಬೆಂಗಳೂರಿನಿಂದ ದಿಲ್ಲಿವರೆಗೆ ದೇಶದಲ್ಲಿ ನೀವು ಬದಲಾವಣೆ ತರಬೇಕು ಎಂದು ಡಿಕೆಶಿ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಎಂಎಲ್ಸಿ ಬಿ.ಕೆ. ಹರಿಪ್ರಸಾದ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ದಕ್ಷಿಣ ನಗರ ಜಿಲ್ಲೆ ಅಧ್ಯಕ್ಷ ಜಿ. ಕೃಷ್ಣಪ್ಪ ಮತ್ತಿತರರು ಇದ್ದರು.