ಬೆಂಗಳೂರು: ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರನ್ನು ಮುಂಬೈನಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡುವ ಮುಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ರೆಬೆಲ್ ಶಾಸಕರನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ ಎಂಬ ವಿಚಾರವನ್ನು ನಾನು ಈಗ ತಿಳಿದುಕೊಂಡಿದ್ದೇನೆ. ಅವರ ಮೊಬೈಲ್ಗಳನ್ನು ಕಿತ್ತಿಟ್ಟುಕೊಳ್ಳಲಾಗಿದೆ. ಹೋಟೆಲ್ ಒಳಗೆ ಲಾಕ್ ಮಾಡಿ ಇಡಲಾಗಿದ್ದು, ಹೊರಗೆ ಕಾಲು ಕೂಡ ಇಡದಂತೆ ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ಹೇಳಿದ್ದಾರೆ.
![Dinesh Gundurao tweet](https://etvbharatimages.akamaized.net/etvbharat/prod-images/3858081_bng.jpeg)
ಸದ್ಯ ಅವರು ಬಿಜೆಪಿಯವರ ಕಪಿಮುಷ್ಠಿಯಲ್ಲಿದ್ದಾರೆ. ಹಾಗೂ ತಾವು ಅನರ್ಹವಾಗುವುದು ಖಚಿತ ಎಂಬ ಭಾವನೆ ತಾಳಿದ್ದಾರೆ. ಅಲ್ಲದೇ ಅವರು ಅತ್ಯಂತ ಶೀಘ್ರವೇ ಬಿಜೆಪಿಯ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿಫಾರಂಗೆ ಸರದಿಯಲ್ಲಿ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಮಾನಸಿಕವಾಗಿ ಅತೃಪ್ತರು ವಾಪಸ್ ಬರುವುದಿಲ್ಲ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.