ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಬ್ಬರು ಬಿಬಿಎಂಪಿ ಸದಸ್ಯರನ್ನು ಕಾಂಗ್ರೆಸ್ ಇಂದು ಉಚ್ಛಾಟಿಸಿದೆ.
![congress dismissed two BBMP members](https://etvbharatimages.akamaized.net/etvbharat/prod-images/5191937_312_5191937_1574842897282.png)
ಜಯಮಹಲ್ ವಾರ್ಡ್ ಸಂಖ್ಯೆ 63ರ ಸದಸ್ಯ ಎಂ.ಕೆ. ಗುಣಶೇಖರ್, ರಾಮಸ್ವಾಮಿಪಾಳ್ಯ ವಾರ್ಡ್ ನಂ.62 ಸದಸ್ಯೆ ನೇತ್ರಾವತಿ ಕೃಷ್ಣೇಗೌಡ, ಸಂಪಂಗಿರಾಮನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಕೃಷ್ಣೇಗೌಡ ಅವರು ಉಚ್ಛಾಟನೆಗೊಂಡ ಪಾಲಿಕೆ ಸದಸ್ಯರಾಗಿದ್ದಾರೆ. ಪಕ್ಷದ ಶಿಸ್ತುಕ್ರಮ ಉಲ್ಲಂಘಿಸಿದ ಹಿನ್ನೆಲೆ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಕೆಪಿಸಿಸಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಾಜಿನಗರ ಕ್ಷೇತ್ರ ಉಪಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿದ್ದು, ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡುವ ಬದಲು, ಕಾಂಗ್ರೆಸ್ನಿಂದ ಅನರ್ಹರಾಗಿ ಇದೀಗ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರವಣ ಪರ ಬಹಿರಂಗವಾಗಿ ಪ್ರಚಾರ ನಡೆಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪಾಲಿಕೆ ಸದಸ್ಯರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿ ಉಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.