ಬೆಂಗಳೂರು: ರಾಜ್ಯದ ಸಚಿವರ ಜೊತೆ ಇಂದು ಅತಿವೃಷ್ಟಿ ಸಂಬಂಧ ಪ್ರಧಾನಿ ಮಾಹಿತಿ ಪಡೆಯುತ್ತಿದ್ದಾರೆ. ಈ ಸಾರಿಯಾದರೂ ಸಮಸ್ಯೆ ಅರಿತು ಪರಿಹಾರ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ವಿವಿಧ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಪರಿಹಾರ ಧನ ವಿತರಿಸಬೇಕೆಂದು ಒತ್ತಾಯಿಸಿದ್ದು, ಕಳೆದ ಬಾರಿ ಆದ ಅನ್ಯಾಯ ಈ ಸಾರಿ ಆಗದಿರಲಿ. ರಾಜ್ಯದ ಸಚಿವರು ಪ್ರಧಾನಿ ಮುಂದೆ ಸಮರ್ಥವಾಗಿ ಸಮಸ್ಯೆಯನ್ನು ವಿವರಿಸುವ ಕಾರ್ಯ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಪ್ರಧಾನಿಯವರಿಗೆ ಯಾವ ಕಳಕಳಿಯೂ ಇಲ್ಲ. ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು, ಕನಿಷ್ಠ ಒಂದು ಸಾಂತ್ವನವನ್ನೂ ಅವರು ಹೇಳಿರಲಿಲ್ಲ. ಇದೀಗ ಮತ್ತೆ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಸ್ತೆ, ಸೇತುವೆ ಕುಸಿದು ಹೋಗುತ್ತಿವೆ. ಮೂರೂವರೆ ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರ ತಕ್ಷಣವೇ ನೆರವು ನೀಡಬೇಕು. ಹಿಂದಿನ ಪರಿಹಾರವನ್ನೂ ಕೇಂದ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಲೆನಾಡು, ಕರಾವಳಿಯಲ್ಲಿ ಅಪಾರ ಹಾನಿ:
ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಮಾತನಾಡಿ, ಕಳೆದ ವಾರದಿಂದ ಮಲೆನಾಡು, ಕರಾವಳಿಯಲ್ಲಿ ತೀವ್ರವಾಗಿ ಮಳೆಯಾಗುತ್ತಿದೆ. ವಾಡಿಕೆಗಿಂತ ದಿನಕ್ಕೆ 10 ಇಂಚು ಹೆಚ್ಚು ಮಳೆ ಬೀಳ್ತಿದೆ. ಅತಿವೃಷ್ಟಿಯಿಂದ ರೈತರಿಗೆ ಸಂಕಷ್ಡ ಎದುರಾಗಿದೆ. ರೈತರು ಬೆಳೆದ ಬೆಳೆ ನೆಲಕಚ್ಚಿ ಹೋಗಿದೆ. ಅಡಿಕೆ, ಬಾಳೆ, ರಬ್ಬರ್ ಮರಗಳು ನೆಲಕ್ಕುರುಳಿವೆ. ಕರಾವಳಿ, ಮಲೆನಾಡಿನಲ್ಲಿ ಕಳೆದ ಬಾರಿಯೂ ಹಾನಿಯಾಗಿತ್ತು. ಕಳೆದ ಬಾರಿಯ ಪರಿಹಾರವನ್ನೇ ಸರ್ಕಾರ ನೀಡಿಲ್ಲ ಎಂದು ಆರೋಪಿಸಿದರು.
ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದ ಮನೆಗೆ ಘೋಷಿಸಿದ್ದ 5 ಲಕ್ಷ ಇನ್ನೂ ತಲುಪಿಲ್ಲ, ಪಿಎಂ ಫಸಲ್ ಭಿಮಾ ಯೋಜನೆಯ ವಿಮೆಯೂ ಸಿಕ್ಕಿಲ್ಲ. 25 ಬಿಜೆಪಿಯ ಸಂಸದರು ರಾಜ್ಯದಲ್ಲಿದ್ದಾರೆ. ಆದರೆ ಯಾರೂ ಸಹ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿಲ್ಲ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿಲ್ಲ. ಕೇಂದ್ರದ ಮೇಲೆ ನೆರವಿಗೆ ಒತ್ತಡವನ್ನೂ ತಂದಿಲ್ಲ. ಮಲೆನಾಡು, ಕರಾವಳಿ ಜನ ಮಳೆಯಿಂದ ತತ್ತರಿಸಿ ಹೋಗ್ತಿದ್ದಾರೆ. ಬೆಳೆ ಕಳೆದುಕೊಂಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರಾಜ್ಯ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.