ಬೆಂಗಳೂರು: ಕೆ.ಜಿ. ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಸದ್ಯ ಕಾಂಗ್ರೆಸ್ ಕಾರ್ಪೊರೇಟರ್ಗೆ ಸುತ್ತಿಕೊಂಡಿದೆ.
ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಪುಲಕೇಶಿನಗರ ವಾರ್ಡ್ ಕಾರ್ಪೊರೇಟರ್ ಜಾಕೀರ್ ಹುಸೇನ್ಗೆ ಸಿಸಿಬಿ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಕೀರ್ ಹುಸೇನ್ ವಿಚಾರಣೆಗೆ ಹಾಜರಾಗಿದ್ದಾರೆ. ಸದ್ಯ ಸಿಸಿಬಿ ಕಚೇರಿಯಲ್ಲಿ ಡ್ರಿಲ್ ಶುರುವಾಗಿದ್ದು, ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿನ ತಂಡ ವಿಚಾರಣೆ ನಡೆಸುತ್ತಿದೆ.
ಗಲಾಟೆಗೆ ಕೈ ನಾಯಕರ ಲಿಂಕ್ ಏನು?: ಶಾಸಕ ಅಖಂಡ ಶ್ರೀನಿವಾಸ್ ಜೊತೆಗೆ ಸಂಪತ್ ರಾಜ್ ಮತ್ತು ಜಾಕೀರ್ ಹುಸೇನ್ ಅವರಿಗೆ ಅಸಮಾಧಾನವಿತ್ತು ಎಂದು ಹೇಳಲಾಗ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪುಲಕೇಶಿನಗರ ಕ್ಷೇತ್ರದ ಟಿಕೆಟ್ ಅನ್ನು ಸಂಪತ್ ರಾಜ್ ಬಯಸಿ ರಾಜಕೀಯವಾಗಿ ಎಲ್ಲಾ ತಯಾರಿ ನಡೆಸಿದ್ದರು. ಹಾಗೆ ಸಂಪತ್ ರಾಜ್ ಜೊತೆ ಜಾಕೀರ್ ಹುಸೇನ್ ಶಿವಾಜಿ ನಗರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಸದ್ಯ ಗಲಭೆಯ ಹಿಂದೆ ಕೈವಾಡ ಇರುವ ಶಂಕೆ ಮೇರೆಗೆ ಸಿಸಿಬಿ ವಿಚಾರಣೆಗೆ ಬುಲಾವ್ ನೀಡಿದ್ದರು.
ಘಟನೆ ನಡೆದಾಗ ಮತ್ತು ಘಟನೆ ನಡೆಯುವ ಮುನ್ನ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್ ಇಬ್ಬರು ಮೊಬೈಲ್ನಲ್ಲಿ ನಿರಂತರ ಸಂಪರ್ಕದಲ್ಲಿದ್ರು. ಹಾಗೆ ಬಂಧಿತ ಕೆಲ ಆರೋಪಿಗಳ ಜೊತೆ ಮಾತುಕತೆ ನಡೆಸಿರುವ ವಿಚಾರ ಸದ್ಯ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. ಹೀಗಾಗಿ ಪೊಲೀಸರು ಇಬ್ಬರನ್ನು ತನಿಖೆ ನಡೆಸಿ ಅವಶ್ಯಕತೆಯಿದ್ದರೆ ಬಂಧಿಸುವ ಸಾಧ್ಯತೆಯಿದೆ. ಇಬ್ಬರಿಗೂ ನಿನ್ನೆ, ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು.