ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರುತ್ತಿದ್ದಂತೇ, ಪಾಲಿಕೆಯ ಕೆಲ ಸದಸ್ಯರು ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯದ್ರಲ್ಲೇ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರದ ವೇಳೆಯೂ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪಾಲಿಕೆ ಸದಸ್ಯರನ್ನು ಕಾಂಗ್ರೆಸ್ನಿಂದ ಉಚ್ಛಾಟಿಸಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬೈರತಿ ಬಸವರಾಜ್ ಜೊತೆಗೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯರಾದ ಕೆಆರ್‌ಪುರಂ ಕ್ಷೇತ್ರದ ಬಸವನಪುರ ವಾರ್ಡ್‌ನ ಜಯಪ್ರಕಾಶ್, ದೇವಸಂದ್ರ ವಾರ್ಡ್‌ನ ಶ್ರೀಕಾಂತ್‌ಗೌಡ, ನಾರಾಯಣ್‌ಪುರ ವಾರ್ಡ್‌ನ ಸುರೇಶ್, ವಿಜ್ಞಾನನಗರ ವಾರ್ಡ್‌ನ ಎಸ್ ಜಿ ನಾಗರಾಜ್ ಗುರುತಿಸಿಕೊಂಡಿದ್ದಾರೆ. ಇನ್ನು, ಯಶವಂತಪುರ ಕ್ಷೇತ್ರದಲ್ಲಿ ಆರ್ಯ ಶ್ರೀನಿವಾಸ್, ಉಲ್ಲಾಳ ರಾಜಣ್ಣ, ವಾಸುದೇವ್ ಕೂಡ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು, ಆರ್‌ಆರ್‌ನಗರದಲ್ಲಿಯೂ ಮುನಿರತ್ನ ಬೆಂಬಲಿಗರಾದ ಎನ್ಟಿಆರ್, ವೇಲು ನಾಯ್ಕರ್, ಜಾನಿ ಅಲಿಯಾಸ್ ಶ್ರೀನಿವಾಸ್ ಮೂರ್ತಿ ಕೂಡ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚು. ಶಿವಾಜಿನಗರದಲ್ಲಿ ರೋಷನ್ ಬೇಗ್ ಬೆಂಬಲಿಗರಾದ ಗುಣಶೇಖರ್, ಮಹ್ಮದ್ ಜಮೀರ್ ಶಾ,ಶಕೀಲ್ ಅಹ್ಮದ್ ಕೂಡ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ರನ್ನು ಬೆಂಬಲಿಸೋದು ಅನುಮಾನ ಎನ್ನಲಾಗ್ತಿದೆ.
ಈ ಬಗ್ಗೆ ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್, ಸುಮಾರು ಪಾಲಿಕೆ ಸದಸ್ಯರು ಅನರ್ಹ ಶಾಸಕರ ಜೊತೆ ಹೋಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆ ಶಾಸಕರ ಜೊತೆ ಓಡಾಡುತ್ತಿದ್ದಾರೆ. ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾಹಿತಿ ತಗೊಂಡು, ರಾಜ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ಗೆ ವರದಿ ನೀಡಲಾಗುವುದು. ಪಕ್ಷ ಉಚ್ಛಾಟನೆ ಮಾಡುವಂತೆ ಮನವಿ ಮಾಡುತ್ತೇವೆ. ಪಕ್ಷದ ಉಚ್ಛಾಟನೆ ಆದ ಮೇಲೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಪಾಲಿಕೆ ಸದಸ್ಯ ಸ್ಥಾನ ರದ್ದು ಮಾಡಿಸಲಾಗುವುದು ಎಂದರು.