ಬೆಂಗಳೂರು: ಉಪಚುನಾವಣೆ ಘೋಷಣೆಯಾಗಲಿರುವ ಬಸವಕಲ್ಯಾಣದಲ್ಲಿ ಅನುಕಂಪಕ್ಕೆ ಬೆಲೆ ಕೊಡುವ ಬದಲು ಗೆಲ್ಲುವ ಅಭ್ಯರ್ಥಿ ಹುಡುಕುವತ್ತ ಕಾಂಗ್ರೆಸ್ ಚಿತ್ತ ಹರಿಸಿದೆ.
ಇದುವರೆಗೂ ಶಾಸಕರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಅವರ ಕುಟುಂಬ ಸದಸ್ಯರನ್ನೇ ನಿಲ್ಲಿಸಿ ಅನುಕಂಪದ ಅಲೆಯ ಮೇಲೆ ಗೆಲ್ಲಿಸಿಕೊಳ್ಳುವ ಸಂಪ್ರದಾಯ ರೂಢಿಯಲ್ಲಿತ್ತು. ಆದರೆ ಇದೀಗ ಇಂಥದ್ದೊಂದು ಸಂಪ್ರದಾಯಕ್ಕೆ ರಾಜ್ಯದಲ್ಲಿ ಕಡಿವಾಣ ಹಾಕಿ ಬಿಜೆಪಿ ಯಶಸ್ಸು ಕಂಡಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಕುಟುಂಬದ ಸದಸ್ಯರ ಬದಲು ಬೇರೊಬ್ಬರಿಗೆ ಸ್ಥಾನ ನೀಡಿ ಗೆಲ್ಲಿಸಿಕೊಳ್ಳಲಾಗಿದೆ. ಈಗ ಬೆಳಗಾವಿ ಲೋಕಸಭೆ ಕ್ಷೇತ್ರ ಉಪಚುನಾವಣೆಯಲ್ಲೂ ಸುರೇಶ್ ಅಂಗಡಿ ಕುಟುಂಬದ ಬದಲು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿ ಅನುಕಂಪದ ಅವಲಂಬನೆಯಿಂದ ದೂರವಾಗುವ ಪ್ರಯತ್ನ ನಡೆಯುತ್ತಿದೆ.
ಇದರ ಬೆನ್ನಲ್ಲೇ ಇತ್ತೀಚೆಗೆ ನಡೆದ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅನುಕಂಪದ ಅಲೆ ಆಧರಿಸಿ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡಿ ಕೈ ಸುಟ್ಟುಕೊಂಡಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಬಸವಕಲ್ಯಾಣದಲ್ಲಿ ಶಾಸಕ ನಾರಾಯಣ್ ರಾವ್ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಕುಟುಂಬ ಸದಸ್ಯರ ಬದಲು ಬೇರೊಬ್ಬರಿಗೆ ಟಿಕೆಟ್ ಕೊಡಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ನಾರಾಯಣ ರಾವ್ ಕುಟುಂಬದಲ್ಲಿ ಒಂದಿಷ್ಟು ಗೊಂದಲಗಳಿವೆ. ಚುನಾವಣೆಯಲ್ಲಿ ಸ್ಪರ್ಧಿಸಲು ರಾವ್ ಅವರ ಪತ್ನಿಗೆ ಟಿಕೆಟ್ ಪತ್ನಿಗೆ ನೀಡಿದಲ್ಲಿ ಅನುಕಂಪ ಗಿಟ್ಟಿಸಬಹುದು. ಅದರ ಬದಲು ಪುತ್ರನಿಗೆ ನೀಡಿದರೆ ಅನುಕಂಪ ಕೆಲಸ ಮಾಡಲ್ಲ ಅನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಪುತ್ರನಷ್ಟು ಪತ್ನಿಗೆ ರಾಜಕೀಯ ಅನುಭವ ಇಲ್ಲ. ಅಲ್ಲದೆ ಟಿಕೆಟ್ ಅನ್ನು ಕುಟುಂಬ ಸದಸ್ಯರಿಗೆ ನೀಡುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸಹ ಗೊಂದಲದಲ್ಲಿದ್ದಾರೆ ಎಂಬ ಮಾಹಿತಿ ಇದೆ.
ನಿರಂತರ 40 ವರ್ಷ ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮಿಸಿ, ಕೇವಲ ಎರಡೂವರೆ ವರ್ಷ ಶಾಸಕರಾಗಿ ಅಧಿಕಾರ ವಹಿಸಿ ನಿಧನರಾಗಿರುವ ನಾರಾಯಣ್ ರಾವ್ ಅವರಿಂದ ಕ್ಷೇತ್ರ ತೆರವಾಗಿದೆ. ಕ್ಷೇತ್ರ ಮರಳಿ ಕೈವಶ ಮಾಡಿಕೊಳ್ಳಲು ಅನುಕಂಪದ ಅಲೆಯೂ ಕೆಲಸ ಮಾಡುವುದಿಲ್ಲ ಅನ್ನುವುದು ಕಾಂಗ್ರೆಸ್ ನಾಯಕರಿಗೆ ಖಚಿತವಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಪರ್ಯಾಯ ಅಭ್ಯರ್ಥಿಯ ಹುಡುಕಾಟ ನಡೆಸಲಾಗಿದೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನುಕಂಪಕ್ಕಿಂತ ಎದುರು ಕಾಣುವ ಜನಪ್ರಿಯ ಮುಖವನ್ನೇ ಜನ ಬೆಂಬಲಿಸುತ್ತಿರುವುದು ಗೋಚರಿಸುತ್ತಿದೆ. ಶಿರಾದಲ್ಲಿ ಯಾವುದೇ ಪಕ್ಷದಿಂದ ನಿಂತರೂ ರಾಜೇಶ್ ಗೌಡ ಗೆಲ್ಲುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಕೊನೆಗೆ ಕಾಂಗ್ರೆಸ್, ಜೆಡಿಎಸ್ ಕೈಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಿಂತು ಅವರು ಗೆದ್ದಿದ್ದಾರೆ. ಇದೀಗ ಜನ ಅನುಕಂಪಕ್ಕೆ ಅಷ್ಟಾಗಿ ಬೆಲೆ ಕೊಡುತ್ತಿಲ್ಲ ಎನ್ನುವ ಅರಿವಾಗಿರುವ ಕಾಂಗ್ರೆಸ್ ಕೂಡ ಬದಲಾವಣೆ, ಯುವಮುಖ ಹಾಗೂ ಗೆಲುವ ಅಭ್ಯರ್ಥಿಯ ಹುಡುಕಾಟ ನಡೆಸಿದೆ. ಇದನ್ನು ಬಸವಕಲ್ಯಾಣ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮತ್ತು ಅದನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತು ಸ್ಪಷ್ಟಪಡಿಸಿದೆ.
ಆಕಾಂಕ್ಷಿಗಳ ಪಟ್ಟಿ:
ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಸಾಕಷ್ಟು ದೊಡ್ಡದಾಗಿದ್ದು, 18ಕ್ಕೂ ಹೆಚ್ಚು ಮಂದಿ ಅಕಾಂಕ್ಷಿಗಳು ತಾವು ಗೆಲ್ಲುವ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ವಿಧಾನಪರಿಷತ್ ಸದಸ್ಯರಾದ ವಿಜಯ್ ಸಿಂಗ್ ಹಾಗೂ ಚಂದ್ರಶೇಖರ್ ಪಾಟೀಲ್ ಆಕಾಂಕ್ಷಿಗಳು. ಇವರೂ ಸೇರಿದಂತೆ ದಿ.ಬಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಬಿ. ನಾರಾಯಣರಾವ್, ಪುತ್ರ ಗೌತಮ್ ಬಿ. ನಾರಾಯಣರಾವ್, ಪ್ರಮುಖರಾದ ಶಾಂತಪ್ಪ ಜಿ ಪಾಟೀಲ್, ಬಸವರಾಜ ಬುಳ್ಳಾ, ಶಿವಶರಣ ಬಿರಾದಾರ್, ಬಾಬು ನಾಯಕ್, ಆನಂದ್ ದೇವಪ್ಪ, ಮರುಳೀಧರ ಏಕಲಾರಕರ್, ಅಮೃತರಾವ್ ಚಿಮಕೋಡೆ, ಶಂಕರ ಜಮಾದಾರ್, ಸುಧಾಕರ ಗುರ್ಜರ್, ಶಿವರಾಜ ನರಶೆಟ್ಟಿ, ಏಜಾಜ್ ಲಾತೂರ, ಸುನಿಲ್ ಬಿರಾದಾರ್, ಅಲಿ ಸಾಬ್ ಖಾದ್ರಿ, ಅರ್ಜುನ ಕನಕ, ಡಿ.ಕೆ. ದಾವೂದ್ ಅವರುಗಳು ಸಮಿತಿಯ ಮುಂದೆ ಹಾಜರಾಗಿ ಚುನಾವಣೆಗೆ ಸ್ಪರ್ಧಿಸಲು ತಮಗಿರುವ ಶಕ್ತಿ, ಸಂಪರ್ಕ, ಸಾಮಥ್ಯದ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಅಂತಿಮವಾಗಿ ಜಾತಿ, ಪ್ರಭಾವ, ಆರ್ಥಿಕ ಸಾಮಥ್ಯ ಸೇರಿದಂತೆ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ನಡೆಸುವ ಸವಾಲು ಕಾಂಗ್ರೆಸ್ ಮುಂದಿದೆ.