ಬೆಂಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೆರೆ ಸಂತ್ರಸ್ತರ ಪರಿಹಾರ ವಿತರಣೆ ಮಾಡದೇ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿಯಾಗಿ ಇಂದು ರಾಜ್ಯ ಪೊಲೀಸ್ ಮಹಾನಿರೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ನೆರೆ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಸೂಕ್ತ ಸಮಯದಲ್ಲಿ ಸಂತ್ರಸ್ತರಿಗೆ ವಿತರಿಸದೆ ಜನರಿಗೆ ವಂಚಿಸಿ ಪರಿಹಾರದ ಸಾಮಗ್ರಿ ಹಾಗೂ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೂಡಲೇ ತನಿಖೆ ನಡೆಸಿ ಪ್ರಕರಣ ದಾಖಲು ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ದೂರುದಾರರು ಇದೇ ಸಂದರ್ಭ ಮನವಿ ಮಾಡಿಕೊಂಡರು.
ದೂರು ಸಲ್ಲಿಕೆ ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್, ರಾಜ್ಯದಲ್ಲಿ ಈ ಬಾರಿ ಮಳೆ ಹಾನಿಗೆ ಅನೇಕ ಜಿಲ್ಲೆಗಳು ಜಲಾವೃತಗೊಂಡು ಅನೇಕ ಪ್ರದೇಶಗಳು ಮುಳುಗಡೆಯಾಗಿ ಸಾಕಷ್ಟು ಜನ ತೊಂದರೆಗೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಜನರ ಸಂಘ ಸಂಸ್ಥೆಗಳು, ಮಾಧ್ಯಮ ಹಾಗೂ ರಾಜಕೀಯ ಪಕ್ಷಗಳ ಮೂಲಕ ಸಹಾಯ ಹಸ್ತವನ್ನು ನೀಡಿ ನೆರೆ ಸಂತ್ರಸ್ತರಿಗೆ ಉತ್ತಮವಾಗಿ ಸಹಕಾರ ನೀಡಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸಂಗ್ರಹಿಸಲಾದ ಸಾಮಾಗ್ರಿಗಳನ್ನು ನೆರೆ ಸಂತ್ರಸ್ತರಿಗೆ ವಿತರಿಸದೆ ಶಾಸಕ ಎಂ.ಪಿ.ರೇಣುಕಾಚಾರ್ಯ ತನ್ನ ಜನಸಂಪರ್ಕ ಕಚೇರಿಯಲ್ಲೇ ಶೇಖರಣೆ ಮಾಡಿಕೊಂಡು ವ್ಯರ್ಥವಾಗಿಸಿದ್ದಾರೆ. ಈ ಕೃತ್ಯವನ್ನು ತನಿಖೆ ನಡೆಸಿ ಸಾರ್ವಜನಿಕರಿಂದ ಸಂಗ್ರಹಿಸಿದ ಅಗತ್ಯ ಸಾಮಾಗ್ರಿಗಳನ್ನು ತನ್ನ ಕಚೇರಿಯಲ್ಲೇ ಶೇಖರಣೆ ಮಾಡಿಕೊಂಡು ಸಂತ್ರಸ್ತರಿಗೆ ನೀಡುವಲ್ಲಿ ವಿಳಂಬ ಮಾಡಿ, ಅಗತ್ಯ ಸಾಮಾಗ್ರಿಗಳು ಕೊಳೆತು ಹಾಳಾಗುವಂತೆ ಮಾಡಿರುವ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.