ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ ಹಿನ್ನೆಲೆ ಆಕ್ರೋಶಗೊಂಡಿರುವ ಕಾಂಗ್ರೆಸ್ ನಾಯಕರು ಇಂದು ಸಿಎಂ ಭೇಟಿಯನ್ನ ರದ್ದುಪಡಿಸಿದ್ದಾರೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿಂದು ಕಾಂಗ್ರೆಸ್ ನಾಯಕರು ಭೇಟಿಯಾಗಬೇಕಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದ ನಿಯೋಗ ತೆರಳಿ ಸಿಎಂ ಬಿಎಸ್ವೈ ಭೇಟಿ ಮಾಡಲು ನಿರ್ಧರಿಸಿತ್ತು. ರಾಜ್ಯದ ನೆರೆ ಹಾಗೂ ಬರಪೀಡಿತ ಪ್ರದೇಶಗಳಿಗೆ ತಮ್ಮ ನಿಯೋಗ ಭೇಟಿ ಕೊಟ್ಟು ಸಂಗ್ರಹಿಸಿದ ಮಾಹಿತಿಯ ವರದಿಯನ್ನು ಸಿಎಂಗೆ ಸಲ್ಲಿಸಲು ಮುಂದಾಗಿತ್ತು. ಆದರೆ ಡಿಕೆಶಿ ವಿಚಾರವನ್ನು ಮುಂದಿಟ್ಟುಕೊಂಡು ಇಂದಿನ ಭೇಟಿಯನ್ನು ಮೊಟಕುಗೊಳಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ರಿಂದ ಸಿಎಂ ಭೇಟಿಯ ಸಮಯ ನಿಗದಿಯಾಗಿತ್ತು. ಸಂಜೆ 4.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಆಗಬೇಕಿತ್ತು. ಆದರೆ ಕಾಂಗ್ರೆಸ್ ಕಚೇರಿಯಲ್ಲಿ ಮಹತ್ವದ ಸಭೆ ಕರೆದಿದ್ದು, ನಾಯಕರು ಕೃಷ್ಣದತ್ತ ತೆರಳದಿರಲು ನಿರ್ಧರಿಸಿದ್ದಾರೆ.
ಇದೀಗ ಡಿಕೆಶಿ ಬಂಧನ ಹಿನ್ನೆಲೆ ರಾಜ್ಯಾದ್ಯಂತ ಪ್ರತಿಭಟನೆ ಹೆಚ್ಚಾಗಿರೋದ್ರಿಂದ ಸಿಎಂ ಭೇಟಿಯಿಂದ ಕಾಂಗ್ರೆಸ್ ನಾಯಕರು ದೂರ ಉಳಿದಿದ್ದಾರೆ ಎಂದು ಹೇಳಲಾಗ್ತಿದೆ.