ಬೆಂಗಳೂರು: ಸಾವಿರಾರು ಸುಳ್ಳು ಹೇಳಿ ಮದುವೆ ಮಾಡಿ ಎಂಬ ಮಾತಿದೆ. ಅದೇ ರೀತಿ ಇಂದು ಐದು ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿಯನ್ನು ಟೀಕೆ ಮಾಡಿತ್ತು. ಚುನಾವಣೆಯಲ್ಲಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿತ್ತು. ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ರಾಜ್ಯದ ಜನರ ವಿಶ್ವಾಸ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿತ್ತು. ಕೋವಿಡ್ ವೇಳೆ ದೇಶದ ಪ್ರಧಾನಿ ಮೋದಿ ಕಠಿಣ ಕ್ರಮಗಳಿಂದ ದೇಶವನ್ನು ರಕ್ಷಿಸುವ ಕೆಲಸ ಮಾಡಿದರು. ಉಚಿತ ಲಸಿಕೆ ಕೊಡುವ ಮೂಲಕ ಸಮಸ್ಯೆಯಿಂದ ಹೊರ ಬರುವ ತರ ಮಾಡಿದ್ದನ್ನು ಜಗತ್ತೇ ಮೆಚ್ಚಿದೆ ಎಂದರು.
ಅಂದಿನ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭ ಮೊದಲ ಲಸಿಕೆಯನ್ನು ದೇಶದಲ್ಲೇ ಮೊದಲಿಗೆ ಶೇ 100ರಷ್ಟು ಕೊಡುವ ಕೆಲಸ ಮಾಡಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದರು. ಈ ವೇಳೆ, ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಮಾತನಾಡುತ್ತಾರಾ?. ಅಥವಾ ಬಜೆಟ್ ಬಗ್ಗೆ ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯರು ಬಿ.ವೈ. ವಿಜಯೇಂದ್ರ ಬೆಂಬಲಕ್ಕೆ ನಿಂತರು. ನಿಮ್ಮವರು ಹರಿಕತೆ ಮಾತನಾಡಿದ್ದಾರೆ. ಅವರಿಗೆ ಮಾತನಾಡಲು ಅಡ್ಡಿ ಪಡಿಸಬೇಡಿ ಎಂದು ಎದ್ದು ನಿಂತು ಬೆಂಬಲಕ್ಕೆ ನಿಂತರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಸದನದಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವ ಕೆಲಸ ಬಜೆಟ್ನಲ್ಲೂ ಆಗಿದೆ. ಹಾಗಾಗಿ ಬಿಜೆಪಿ ಸದಸ್ಯನಾಗಿ ಅದಕ್ಕೆ ಉತ್ತರ ಕೊಡುವುದು ನನ್ನ ಕರ್ತವ್ಯ. ನನ್ನ ಹಕ್ಕನ್ನು ನಾನು ಮಂಡಿಸುತ್ತೇನೆ. ಪಂಚ ಗ್ಯಾರಂಟಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಐವತ್ತು ವರ್ಷ ಆಡಳಿತ ನಡೆಸಿದವರು ಕಾಂಗ್ರೆಸ್ನವರೇ. ಈಗಲೂ ರಾಜ್ಯದ ಜನರಿಗೆ ಉಚಿತ ಕೊಡುವ ಪರಿಸ್ಥಿತಿ ನಿರ್ಮಾಣ ಮಾಡಿರುವುದಕ್ಕೆ ಕಾರಣ ಕಾಂಗ್ರೆಸ್ ಪಕ್ಷದವರಾಗಿದ್ದಾರೆ ಎಂದು ದೂರಿದರು.
ಹೊಸ ಶಾಸಕರಿಗೆ ವಿಶೇಷ ಅನುದಾನ ನೀಡಿ: ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತೀರಿ. ಅದೇ ರೀತಿ ಮೊದಲ ಬಾರಿಗೆ ಗೆದ್ದ ಎಲ್ಲಾ ಪಕ್ಷದ ಶಾಸಕರಿಗೆ ವಿಶೇಷ ಅನುದಾನ ಕೊಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಕಾಂಗ್ರೆಸ್ನವರು ಕುಂತಲ್ಲಿ ನಿಂತಲ್ಲಿ ಪ್ರಧಾನಿ ಮೋದಿಯವರನ್ನು ಟೀಕೆ ಮಾಡುವುದು ಬಿಟ್ಟು ಒಕ್ಕೂಟ ವ್ಯವಸ್ಥೆಯಲ್ಲಿ ಅವರಿಗೆ ಗೌರವ ಕೊಡಿ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆ ಕೆಲಸವನ್ನು ಒಪ್ಪಬೇಕು. ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ ಗೆದ್ದಿರಬಹುದು, ಕರ್ನಾಟಕದಲ್ಲಿ ಗೆದ್ದಿರಬಹುದು. ಆದರೆ ಇಡೀ ದೇಶ ಗೆದ್ದಿಲ್ಲ. ಮುಂದೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲಿದ್ದಾರೆ. ಎಲ್ಲರನ್ನೂ ಜೊತೆಗೆ ಕೊಂಡೊಯ್ಯಿರಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ: ಜನಾರ್ದನ ರೆಡ್ಡಿ ಆರೋಪ