ಬೆಂಗಳೂರು : ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಮ್ಮೆ ಟ್ವೀಟ್ ವಾರ್ ಜೋರಾಗಿದೆ. ಭಾರತವಷ್ಟೇ ಅಲ್ಲ, ಜಗತ್ತಿನ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಜನತೆಯ ಪ್ರಶ್ನೆಗಳಿಗೆ ಉತ್ತರಿಸದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದೆ.
ಎಲ್ಲೋ ಅಡಗಿ ಕುಳಿತು ಮನ್ ಕಿ ಬಾತ್ ಹೇಳುವುದಲ್ಲ, ಜನರ ನಡುವೆ ಬಂದು ಜನ್ ಕಿ ಬಾತ್ ಕೇಳಬೇಕು. ಉತ್ತರ ನೀಡದ ಉತ್ತರ ಕುಮಾರ ಆಗಿದ್ದೇಕೆ ನಿಮ್ಮ ಮೋದಿ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ. ಇದಕ್ಕೆ ಟ್ವೀಟ್ ಮೂಲಕವೇ ಕಾಲೆಳೆದ ಬಿಜೆಪಿ, ಕಾಂಗ್ರೆಸ್ ಈಗ ದಿಕ್ಕೆಟ್ಟು ಹೋಗಿದೆ. ಈ ಹಿಂದೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡಲು ಎ ಹಿಡಿದು ಜಡ್ ವರೆಗಿನ ಹಗರಣ ಸಿಗುತ್ತಿದ್ದವು. ಮೋದಿ ವಿರುದ್ಧ ಮಾತನಾಡಲು ಕಾಂಗ್ರೆಸ್‌ಗೆ ಸಿಕ್ಕಿರುವ ಅಸ್ತ್ರಗಳು ಸೂಟ್, ಬಿಸ್ಕೆಟ್, ನೀರು, ಅಣಬೆ ವಿಚಾರಗಳು ಸಿಗುತ್ತಿವೆ. ಈಗ ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿ ವಿಷಯಕ್ಕೆ ನೇತುಹಾಕಿಕೊಂಡಿದೆ ಎಂದು ಹೇಳಿದೆ.
ಇದಕ್ಕೆ ಪ್ರತಿಯಾಗಿ ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್, ರಾಜ್ಯ ಬಿಜೆಪಿ ನಾಯಕರೇ, ಸರಿ ಬಿಡಿ ನಿಮ್ಮ ಮೌನ ಮೋದಿ ಅವರ 10 ಲಕ್ಷದ ಸೂಟಿನ ಬಗ್ಗೆ ಮಾತಾಡಲು ನಿಮಗೆ ನೋವಾದರೆ, ದೇಶದ ಆರ್ಥಿಕತೆ -23ಕ್ಕೆ ಕುಸಿದಿದ್ದರ ಬಗ್ಗೆ ಮಾತಾಡಲಿ. ಬಿಸ್ಕೆಟ್ ಬಗ್ಗೆ ಬೇಡ, ನಿರುದ್ಯೋಗ 45 ವರ್ಷಗಳ ಚಾರಿತ್ರಿಕ ಏರಿಕೆಯಾಗಿದ್ದರ ಬಗ್ಗೆ ಮಾತಾಡಲಿ. ದುಬಾರಿ ನೀರಿನ ವಿಷಯ ಬೇಡ, ಚೀನಾ ಅತಿಕ್ರಮಣದ ಬಗ್ಗೆ ಮಾತಾಡಲಿ.
ರಾಜ್ಯ ಬಿಜೆಪಿ ನಾಯಕರು ನಿಮ್ಮ ಮೌನ ಮೋದಿಯ ದುಬಾರಿ ಇಂಪೋರ್ಟೆಡ್ ಅಣಬೆ ಬಗ್ಗೆ ಬೇಡ, ಕರ್ನಾಟಕಕ್ಕೆ ಜಿಎಸ್‌ಟಿ ಪಾಲನ್ನೇಕೆ ಕೊಡಲಿಲ್ಲ ಎಂದು ಮಾತಾಡಲಿ. ನೆರೆ ಪರಿಹಾರ ಏಕಿಲ್ಲ ಎಂದು ತಿಳಿಸಲಿ, ಕರೆಯದೆ ಪಾಕಿಸ್ತಾನಕ್ಕೆ ಏಕೆ ಹೋದರು. ಪಿಎಂ ಕೇರ್ಸ್ ನಿಧಿಯ ನಿಗೂಢತೆ ತಿಳಿಸಲಿ. ಪೆಟ್ರೋಲ್ ಬೆಲೆ ಎಂದು ಇಳಿಸುವರೆಂದು ಹೇಳಲಿ ಎಂದಿದೆ.
ಸ್ಟುಡಿಯೋದಲ್ಲಿ ಕುಳಿತು ಪ್ರಿರೆಕಾರ್ಡೆಡ್ ಲೈವ್ ಬರುವುದನ್ನ ಬಿಟ್ಟು, ಕೋಣೆಯಲ್ಲಿ ಅಡಗಿ ಕುಳಿತು ಮನ್ ಕಿ ಬಾತ್ ಆಡುವುದನ್ನ ಬಿಟ್ಟು ಒಂದು ಪತ್ರಿಕಾಗೋಷ್ಠಿ ನಡೆಸಲಿ, ಭಯವೆನಿಸಿದರೆ ಕರಣ್ ಥಾಪರ್, ರವೀಶ್ ಕುಮಾರ್ರನ್ನು ಆಹ್ವಾನಿಸುವುದೇ ಬೇಡ. ಇಲ್ಲವೇ ರಾಹುಲ್ ಗಾಂಧಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ಸಾಧ್ಯವೇ ರಾಜ್ಯ ಬಿಜೆಪಿ ನಾಯಕರೇ? ಎಂದು ಪ್ರಶ್ನಿಸಿದೆ.
ಇದಕ್ಕೆ ಪ್ರತಿಯಾಗಿ ಟ್ವೀಟಾಸ್ತ್ರ ಪ್ರಯೋಗಿಸಿರುವ ಬಿಜೆಪಿ, ಕೋವಿಡ್ ನಡುವೆಯೂ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಉತ್ತಮ ಆರ್ಥಿಕ ಸ್ಥಿರತೆ ಕಾಪಾಡಿಕೊಂಡಿದೆ ಎಂದು ಅನೇಕ ವರದಿಗಳು ಸ್ಪಷ್ಟಪಡಿಸಿವೆ. 60 ವರ್ಷಗಳ ತಾವು ಮಾಡಿದ್ದೇನು? ನಿರುದ್ಯೋಗದ ಕೊಡುಗೆ ನೀಡಿದ್ದೇ ಕಾಂಗ್ರೆಸ್ ಪಕ್ಷ. ಚೀನಾಕ್ಕೆ 43 ಸಾವಿರ ಚ.ಕಿ.ಮೀ ಭೂಮಿ ಬಿಟ್ಟುಕೊಟ್ಟಿದ್ದು ನೆಹರೂ ಕುಟುಂಬ ಎನ್ನುವುದು ಯಾರೂ ಮರೆತಿಲ್ಲ ಎಂದು ಕಾಲೆಳೆದಿದೆ.
ಇದೀಗ ಇದಕ್ಕೂ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, 'ರಾಜ್ಯ ಬಿಜೆಪಿ ಪಕ್ಷಕ್ಕೆ ಹೇಳಲು ಸಾಧನೆಗಳಿಲ್ಲದೆ, ವೈಫಲ್ಯಗಳ ಸರಮಾಲೆಯನ್ನೇ ಹೊದ್ದಿರುವ ನೀವು ಉತ್ತರವಿಲ್ಲದಾಗ ಆಶ್ರಯಿಸುವುದೇ "60 ವರ್ಷ ಏನು ಮಾಡಿದ್ದಿರಿ" ಎನ್ನುವುದನ್ನ! ನಿಮಗೆ ಸುಲಭಕ್ಕೆ ಉತ್ತರ ಸಿಗಲಿದೆ. ಕಳೆದ 6 ವರ್ಷದಿಂದ ನಿಮ್ಮ ಮೋದಿ ಮಾರಾಟಕ್ಕಿಟ್ಟಿರುವ ದೇಶದ ಆಸ್ತಿಗಳ ಪಟ್ಟಿ ತೆಗೆಯಿರಿ, ಅದೆಲ್ಲವೂ 60 ವರ್ಷದ ನಮ್ಮ ಸಾಧನೆಗಳೇ ಎಂದಿದೆ.