ಬೆಂಗಳೂರು: ಜಿಲ್ಲೆಗಳ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಗೆ ಮುಂದಾಗಿರುವ ಕಾಂಗ್ರೆಸ್ ಪಕ್ಷ, ಹಲವು ಜಿಲ್ಲೆಗಳಿಗೆ ವೀಕ್ಷಕರನ್ನು ನೇಮಿಸಿದೆ.
ಎಐಸಿಸಿ ಸೂಚನೆ ಮೇರೆಗೆ ಕೆಪಿಸಿಸಿ ಈ ಕ್ರಮ ಕೈಗೊಂಡಿದ್ದು, ಅಧಿಕೃತ ಆದೇಶ ಪ್ರಕಟಿಸಿದೆ. ವಿವಿಧ ಜಿಲ್ಲೆಯ ಅಧ್ಯಕ್ಷರುಗಳನ್ನು ಬದಲಾವಣೆ ಮಾಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಆಯಾ ಜಿಲ್ಲೆಗಳಿಗೆ ನೇಮಕವಾಗಿರುವ ವೀಕ್ಷಕರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಆಸಕ್ತರು ಸಪ್ಟೆಂಬರ್ 10ರ ಒಳಗಾಗಿ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ.
ಒಟ್ಟು 9 ಜಿಲ್ಲೆಗಳ ಪೈಕಿ ಚಿತ್ರದುರ್ಗಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ದಾವಣಗೆರೆ ಜಿಲ್ಲೆಗೆ ಮಾಜಿ ಶಾಸಕ ಪಿ.ಎಂ.ಅಶೋಕ್, ಬಾಗಲಕೋಟೆ ಜಿಲ್ಲೆಗೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಯಚೂರು ಜಿಲ್ಲೆಗೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್, ದಕ್ಷಿಣ ಕನ್ನಡ ಜಿಲ್ಲೆಗೆ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್, ವಿಜಯಪುರ ಜಿಲ್ಲೆಗೆ ಮಾಜಿ ಶಾಸಕ ಡಿ.ಆರ್.ಪಾಟೀಲ್, ಕೋಲಾರ ಜಿಲ್ಲೆಗೆ ವಿಧಾನ ಪರಿಷತ್ ಸದಸ್ಯ ಎನ್.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಬೆಳಗಾವಿ ನಗರ ಹಾಗೂ ಗ್ರಾಮಾಂತರ ಜಿಲ್ಲೆಗೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ನೇಮಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಶಫಿವುಲ್ಲಾ ಆದೇಶ ಹೊರಡಿಸಿದ್ದಾರೆ.