ಬೆಂಗಳೂರು: ರಾಜ್ಯದಲ್ಲಷ್ಟೇ ಅಲ್ಲ, ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಕಂಡು ಬರಲೇ ಇಲ್ಲ. ಮೋದಿ ಅವರು ಎರಡು ದಿನ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರೂ ಮತದಾರರು ಬಿಜೆಪಿ ಕಡೆಗೆ ಒಲವು ತೋರಿಸಿಲ್ಲ. ಮೋದಿ ಅವರನ್ನು ನೋಡಲು ಲಕ್ಷಾಂತರ ಜನ ಅಂದು ರಸ್ತೆಗೆ ಇಳಿದಿದ್ದರು. ಬಿಜೆಪಿ ನಾಯಕರಿಗೆ ಸಂತಸವೂ ಆಗಿತ್ತು. ಅವರ ಪ್ರವಾಸ ಬೆಂಗಳೂರಿನಲ್ಲಿ ಅಷ್ಟಾಗಿ ವರ್ಕೌಟ್ ಆಗದಿರುವುದು ಅಚ್ಚರಿ ತರಿಸಿದೆ.
ಕಳೆದ ಬಾರಿ (2018 ರಲ್ಲಿ) ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ 2 ಕ್ಷೇತ್ರಗಳಿಗೆ ಸೀಮಿತವಾಗಿತ್ತು. ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ನ 3 ಹಾಗೂ ಜೆಡಿಎಸ್ ಒಬ್ಬರು ರಾಜೀನಾಮೆ ನೀಡಿ ಚುನಾವಣೆಗೆ ಹೋದರು. ಹಾಗಾಗಿ, ಬಿಜೆಪಿ 16 ಸ್ಥಾನಕ್ಕೆ ಏರಿಕೆ ಮಾಡಿಕೊಂಡಿತ್ತು. ಜೆಡಿಎಸ್ 1 ಸ್ಥಾನ ಉಳಿಸಿಕೊಂಡಿತ್ತು. ಈ ಬಾರಿ ಮೋದಿ ಅಲೆ ವರ್ಕೌಟ್ ಆಗುತ್ತದೆ ಎಂದು ತಿಳಿದಿದ್ದ ಬಿಜೆಪಿ, ಬೆಂಗಳೂರಿನಲ್ಲಿ 20 ಕ್ಕಿಂತ ಹೆಚ್ಚು ಸ್ಥಾನ ಗಳಿಸಲು ಟಾಸ್ಕ್ ಸಹ ನೀಡಿತ್ತು. ಹಾಗಾಗಿಯೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಕೇಂದ್ರದ ಬಹುಪಾಲು ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು.
ಆದರೆ, ಈ ಚುನಾವಣೆಯಲ್ಲಿ 16 ಸ್ಥಾನಕ್ಕೆ ಬಿಜೆಪಿ ಸೀಮಿತವಾಗಿದೆ. ಕಳೆದ ಬಾರಿ ಗೋವಿಂದರಾಜನಗರ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಆದರೆ, ಸಚಿವ ಸೋಮಣ್ಣ ಅವರಿಗೆ ಈ ಕ್ಷೇತ್ರದ ಟಿಕೆಟ್ ಕೈತಪ್ಪಿಸಿ ಉಮೇಶ್ ಶೆಟ್ಟಿ ಅವರಿಗೆ ನೀಡಲಾಗಿತ್ತು. ಇದರ ಪರಿಣಾಮ ಈಗ ಈ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದ್ದರೂ, ದಾಸರಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಗೆದ್ದಿದ್ದು, ಅದನ್ನು ಸರಿದೂಗಿಸಿದೆ. ಬೆಂಗಳೂರಿನಲ್ಲಿದ್ದ ಒಂದು ಕ್ಷೇತ್ರವನ್ನು ಸಹ ಜೆಡಿಎಸ್ ಕಳೆದುಕೊಂಡಿದೆ. ಇನ್ನು ಕಾಂಗ್ರೆಸ್ ಕ್ಷೇತ್ರಗಳಿಗೆ ಲಗ್ಗೆ ಇಡಲು ಯತ್ನಿಸಿದ ಬಿಜೆಪಿಗೆ ಹಿನ್ನಡೆಯಾಗಿದೆ.
ಇನ್ನು ಕಾಂಗ್ರೆಸ್ ಸಹ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಬೆಂಗಳೂರಿನಲ್ಲಿ ಪ್ರಚಾರ ನಡೆಸಿದ್ದರಾದರೂ, ಬಿಜೆಪಿ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಕಳೆದ ಬಾರಿ ಗೆದ್ದ 12 ಸ್ಥಾನಗಳನ್ನೇ ಈ ಬಾರಿಯೂ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮತೋಲನ ಕಾಪಾಡಿಕೊಂಡಿದೆ. ಇಲ್ಲಿ ಜೆಡಿಎಸ್ ಶೂನ್ಯ ಸಂಪಾದನೆಯಾಗಿದೆ.
ಬೆಂಗಳೂರಿನಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ..
ಬ್ಯಾಟರಾಯನಪುರ - ಕೃಷ್ಣಬೈರೇಗೌಡ (ಕಾಂಗ್ರೆಸ್)
ಯಲಹಂಕ - ಎಸ್.ಆರ್. ವಿಶ್ವನಾಥ್ (ಬಿಜೆಪಿ)
ದಾಸರಹಳ್ಳಿ- ಮುನಿರಾಜು (ಬಿಜೆಪಿ)
ಮಹದೇವಪುರ - ಮಂಜುಳಾ ಅರವಿಂದ ಲಿಂಬಾವಳಿ (ಬಿಜೆಪಿ)
ಆನೇಕಲ್ - ಶಿವಣ್ಣ (ಕಾಂಗ್ರೆಸ್)
ಯಶವಂತಪುರ - ಎಸ್.ಟಿ. ಸೋಮಶೇಖರ್ (ಬಿಜೆಪಿ)
ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ (ಬಿಜೆಪಿ)
ರಾಜರಾಜೇಶ್ವರಿನಗರ - ಮುನಿರತ್ನ (ಬಿಜೆಪಿ)
ಶಿವಾಜಿನಗರ - ರಿಜ್ವಾನ್ ಅರ್ಷದ್ (ಕಾಂಗ್ರೆಸ್)
ಶಾಂತಿನಗರ - ಎನ್. ಎ. ಹ್ಯಾರಿಸ್ (ಕಾಂಗ್ರೆಸ್)
ಗಾಂಧಿನಗರ - ದಿನೇಶ್ ಗುಂಡೂರಾವ್ (ಕಾಂಗ್ರೆಸ್)
ರಾಜಾಜಿನಗರ - ಎಸ್. ಸುರೇಶ್ ಕುಮಾರ್ (ಬಿಜೆಪಿ)
ಚಾಮರಾಜಪೇಟೆ - ಜಮೀರ್ ಅಹಮದ್ ಖಾನ್ (ಕಾಂಗ್ರೆಸ್).
ಚಿಕ್ಕಪೇಟೆ- ಉದಯ್ ಗರುಡಾಚಾರ್ (ಬಿಜೆಪಿ)
ಕೆ.ಆರ್.ಪುರಂ - ಬೈರತಿ ಬಸವರಾಜ್ (ಬಿಜೆಪಿ)
ಸಿವಿ ರಾಮನ್ ನಗರ - ಎಸ್. ರಘು (ಬಿಜೆಪಿ)
ಪುಲಕೇಶಿನಗರ - ಎಸಿ ಶ್ರೀನಿವಾಸ್ (ಕಾಂಗ್ರೆಸ್)
ಹೆಬ್ಬಾಳ - ಬೈರತಿ ಸುರೇಶ್ (ಕಾಂಗ್ರೆಸ್)
ಸರ್ವಜ್ಞನಗರ - ಕೆ.ಜೆ. ಜಾರ್ಜ್ (ಕಾಂಗ್ರೆಸ್)
ಗೋವಿಂದರಾಜನಗರ – ಪ್ರಿಯಾ ಕೃಷ್ಣ (ಕಾಂಗ್ರೆಸ್)
ವಿಜಯನಗರ - ಎಂ. ಕೃಷ್ಣಪ್ಪ (ಕಾಂಗ್ರೆಸ್)
ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ (ಕಾಂಗ್ರೆಸ್)
ಜಯನಗರ - ಸಿ.ಕೆ. ರಾಮಮೂರ್ತಿ (ಬಿಜೆಪಿ)
ಮಲ್ಲೇಶ್ವರ - ಅಶ್ವತ್ಥನಾರಾಯಣ (ಬಿಜೆಪಿ)
ಮಹಾಲಕ್ಷ್ಮಿ ಲೇಔಟ್ - ಕೆ. ಗೋಪಾಲಯ್ಯ (ಬಿಜೆಪಿ)
ಬಸವನಗುಡಿ - ರವಿಸುಬ್ರಹ್ಮಣ್ಯ (ಬಿಜೆಪಿ)
ಪದ್ಮನಾಭನಗರ - ಆರ್. ಅಶೋಕ್ (ಬಿಜೆಪಿ)
ಬೊಮ್ಮನಹಳ್ಳಿ - ಸತೀಶ್ ರೆಡ್ಡಿ (ಬಿಜೆಪಿ)
ಇದನ್ನೂ ಓದಿ: ಖರ್ಗೆ ನಿವಾಸಕ್ಕೆ ಸುರ್ಜೆವಾಲ, ಡಿಕೆಶಿ ಭೇಟಿ: ಗೆಲುವಿನ ಸಿಹಿ ಹಂಚಿಕೊಂಡ ನಾಯಕರು