ಬೆಂಗಳೂರು : ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಬಂದಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೋಳನಾಯಕನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಬಿಬಿಎಂಪಿ ಕೋವಿಡ್ ಆಸ್ಪತ್ರೆಗೆ ಕೇಂದ್ರ ಸಚಿವರು ಹಾಗೂ ಶಾಸಕರು ಪರಿಶೀಲನೆಗೆ ತೆರಳಿದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಚೋಳನಾಯಕನಹಳ್ಳಿಯ ರಾಜೀವ್ ಗಾಂಧಿ ಡೆಂಟಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ನಲ್ಲಿ ಅವ್ಯವಸ್ಥೆ ಆರೋಪ ಕೇಳಿ ಬಂದಿತ್ತು.
ಬಿಬಿಎಂಪಿ ನಿರ್ವಹಣೆಯಲ್ಲಿರುವ ಆಸ್ಪತ್ರೆಯ ಸ್ಥಳ ಪರಿಶೀಲನೆಗೆ ತೆರಳಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡಗೆ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ವಿಭಿನ್ನ ಹೇಳಿಕೆ ಲಭಿಸಿದೆ.
ಪರಸ್ಪರ ಅಸಹಕಾರದ ಆರೋಪ ಕೇಳಿ ಬಂದಿದೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಹೋಗಿದ್ದಾರೆ.
ಇದೇ ಸಂದರ್ಭ ಬಿಜೆಪಿ ಕಾರ್ಯಕರ್ತರು ಸಹ ಜಮಾವಣೆಗೊಂಡು ಸದಾನಂದಗೌಡರ ರಕ್ಷಣೆಗೆ ನಿಂತಿದ್ದಾರೆ. ಪರಸ್ಪರ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ದಾಳಿ ನಡೆದಿದೆ. ಪರಿಸ್ಥಿತಿ ತಿಳಿಗೊಳಿಸಲು ಹೆಬ್ಬಾಳ ಪೊಲೀಸರು ಹರಸಾಹಸ ನಡೆಸಿದ್ದಾರೆ.
ಗಲಾಟೆಗೆ ಕಾರಣ : ಹೆಬ್ಬಾಳ ಶಾಸಕ ಬೈರತಿ ಸುರೇಶ್ 70 ಲಕ್ಷ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆಯನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಬಿಬಿಎಂಪಿ ಸಹ ಇದಕ್ಕೆ 30 ಲಕ್ಷ ರೂಪಾಯಿ ವೆಚ್ಚ ಭರಿಸಿದೆ.
ಆಸ್ಪತ್ರೆಯಲ್ಲಿ ರಾಜೀವ್ ಗಾಂಧಿ ಫೋಟೋ ಅಳವಡಿಕೆ ಮಾಡಲಾಗಿದೆ ಎಂದು ಸಹ ಆರೋಪಿಸಲಾಗಿದೆ. ಈ ಆಸ್ಪತ್ರೆಯ ಪರಿಶೀಲನೆಗೆ ಸದಾನಂದಗೌಡ ತೆರಳಿದ್ದಾರೆ. ಕೋವಿಡ್ ಕೇರ್ ಸೆಂಟರ್ನ ಅವ್ಯವಸ್ಥೆ ಪರಿಶೀಲನೆ ಮಾಡಲು ಬಂದಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ, ಕೇಂದ್ರದಲ್ಲಿರುವ ರಾಜೀವ್ ಗಾಂಧಿ ಫೋಟೋ ತೆರವುಗೊಳಿಸಲು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ.
ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಕೇಂದ್ರ ಸಚಿವರಿಗೆ ಕೇಂದ್ರದ ಒಳಗೆ ತೆರಳಲು ಅವಕಾಶವನ್ನ ನೀಡಲಾಗಿಲ್ಲ. ಹೊರಗೆ ನಿಂತು ಸಚಿವರು ಮಾಹಿತಿ ಪಡೆಯುತ್ತಿದ್ದ ವೇಳೆ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ಆಗಮಿಸಿ ಘೇರಾವ್ ಹಾಕಿದ್ದಾರೆ.
ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸ್ಥಿತಿಯನ್ನು ಕಂಡ ಪೊಲೀಸರು ಕೇಂದ್ರ ಸಚಿವರ ಜೊತೆ ಸಮಾಲೋಚಿಸಿ ಎರಡು ಪಕ್ಷದ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಈ ವೇಳೆ ಬಿಬಿಎಂಪಿ ಯಾವುದೇ ಮೊತ್ತ ಭರಿಸಿಲ್ಲ. ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಮಾತ್ರ ಸಂಪೂರ್ಣ ಹಣ ವಿನಿಯೋಗಿಸಿದ್ದಾರೆ. ಇದಕ್ಕಾಗಿ ರಾಜೀವ್ ಗಾಂಧಿ ಫೋಟೋ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಅಂತಿಮವಾಗಿ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ತಿಳಿಗೊಂಡಿದೆ. ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸ್ಥಳದಲ್ಲೇ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.