ಬೆಂಗಳೂರು: ಬೆಡ್ ಬ್ಲಾಕಿಂಗ್ ವಿಚಾರವಾಗಿ ತಗಾದೆ ತೆಗೆದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹಾಗೂ ಅವರ ಬೆಂಬಲಿಗರು ಐಎಎಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಮೆರೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ್ ಅವರ ಮೇಲೆ ಬೊಮ್ಮನಹಳ್ಳಿ ವಲಯದ ವಾರ್ ರೂಮ್ ಎದುರು ಹಲ್ಲೆ ನಡೆದಿದೆ. ಸರ್ಕಾರದ ಸೂಚನೆ ಮೇರೆಗೆ ಏ. 29ರಂದು ಅಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಶಾಸಕ ಸತೀಶ್ ರೆಡ್ಡಿ ಬೆಂಬಲಿಗನಾದ ಬಾಬು ಎಂಬಾತನನ್ನು ಕಂಡು ಆತನ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಆತನನ್ನು ವಾರ್ ರೂಮಿಂದ ಹೊರಗೆ ಕಳಿಸಿದ್ದರು. ಈ ಸಂದರ್ಭ ಮಾತಿನ ಚಕಮಕಿ ನಡೆದಿತ್ತು. ಮರುದಿನ ಅಂದರೆ ಏಪ್ರಿಲ್ 30ರಂದು ಶಾಸಕ ಸತೀಶ್ ರೆಡ್ಡಿ ಮತ್ತು ಆತನ ಐವತ್ತು ಜನ ಬೆಂಬಲಿಗರೊಂದಿಗೆ ಎಚ್ಎಸ್ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ನಲ್ಲಿರುವ ವಾರ್ ರೂಮಿನಲ್ಲಿ ಬಂದು ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್, ಇದಕ್ಕೆ ಸಂಬಂಧಿಸಿದ ದಾಖಲೆಯ ರೂಪದಲ್ಲಿ ವಿಡಿಯೋ ಸಹ ಬಿಡುಗಡೆ ಮಾಡಿದೆ.
ಶಾಸಕರ ಆಪ್ತ ಸಹಾಯಕ ಹರೀಶ್, ಮಹಿಳಾ ಮೋರ್ಚಾ ನಾಯಕಿ ಮಹೇಶ್ವರಿ, ರಮೇಶ್, ಮೌಲಾ, ಶಿವಾಜಿ, ಮಂಜುನಾಥ್ ಮತ್ತಿತರರು ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿದೆ.
ಒಬ್ಬ ಐಎಎಸ್ ಅಧಿಕಾರಿಗೆ ರಕ್ಷಣೆ ನೀಡಲು ಪರದಾಡುತ್ತಿರುವ ಸ್ಥಳೀಯ ಇನ್ಸ್ಪೆಕ್ಟರ್ ಮುನಿರೆಡ್ಡಿ ಸಹ ವಿಡಿಯೋದಲ್ಲಿ ಕಂಡಿದ್ದು, ಐಎಎಸ್ ಅಧಿಕಾರಿ ರಕ್ಷಣೆಗೆ ಸಾಕಷ್ಟು ಹೋರಾಟ ನಡೆಸಿದ್ದಾರೆ. ಐಎಎಸ್ ಅಧಿಕಾರಿಗೆ ರಕ್ಷಣೆಯಿಲ್ಲ ಎಂದ ಮೇಲೆ ಕ್ಷೇತ್ರದಲ್ಲಿ ಸಾಮಾನ್ಯ ಅಧಿಕಾರಿಗಳ ಪಾಡೇನು? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.
ಐಎಎಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವ ದೃಶ್ಯವು ಸಾಕ್ಷಿ ಸಮೇತ ರುಜುವಾತಾಗಿರುವುದರಿಂದ ಕೂಡಲೇ ಸತೀಶ್ ರೆಡ್ಡಿಯನ್ನು ಬಂಧಿಸಬೇಕೆಂದು ಆಗ್ರಹ ಮಾಡಿರುವ ಕಾಂಗ್ರೆಸ್ ಪಕ್ಷ, ಇವರ ಬೆಂಬಲಿಗರನ್ನು ಸಹ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.