ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜನಜಾಗೃತಿಗಾಗಿ ರಾಜ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಬೈಕ್ ರ‍್ಯಾಲಿ ಆಯೋಜಿಸಿತ್ತು.
ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು 50ಕ್ಕೂ ಹೆಚ್ಚು ದ್ವಿಚಕ್ರ ವಾಹನದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದವರೆಗೂ ರ‍್ಯಾಲಿ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು, ರಾಷ್ಟ್ರೀಯ ನಾಯಕಿ ಅಪ್ಸರಾ ರೆಡ್ಡಿ, ಶಾಸಕಿ ವಿನಿಶಾ ನಿರೊ ಮತ್ತಿತರರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಹಿಳಾ ಮೀಸಲು ಶೇ.33ರಷ್ಟು ನೀಡಬೇಕೆಂದಿದೆ. ಇದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ವಿಧಾನಸಭೆ ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲಾತಿಗೆ ನಾವು ಹೋರಾಡುವ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಶೋಷಿತಳಾಗಿದ್ದಾಳೆ. ಇದು ನಿವಾರಣೆ ಆಗಬೇಕು. ಅಸಮಾನತೆ, ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಮಹಿಳೆಯರಿಗೆ ಅನ್ಯಾಯ, ದೌರ್ಜನ್ಯ ಆದ ಹಲವು ಸಂದರ್ಭ ನಾವು ಪ್ರದೇಶ ಮಹಿಳಾ ಕಾಂಗ್ರೆಸ್ ತಂಡ ನಮ್ಮ ಬಳಿ ಬಂದ ದೂರಿಗೆ ಸ್ವಯಂ ಪ್ರೇರಣೆಯಿಂದ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವ ಕಾರ್ಯ ಮಾಡುತ್ತಿದ್ದೇವೆ. ಮಹಿಳಾ ಪರ ಹೋರಾಟ ನಡೆಸಿ ನ್ಯಾಯ ತುಂಬುವ ಕಾರ್ಯ ಮಾಡಿದ್ದೇವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಮಾತ್ರ ಆಚರಣೆಗೆ ಮಹತ್ವ ಸಿಗಬಾರದು. ಮಹಿಳೆಯರಿಗೆ ಸುರಕ್ಷತೆ, ಭದ್ರತೆ, ಉದ್ಯೋಗ ಇಲ್ಲ. ಗೃಹ ಹಿಂಸೆ ಹೆಚ್ಚಾಗಿದೆ. ಇದನ್ನು ಜಾಗೃತಿಗೊಳಿಸುವ ಕಾರ್ಯ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣವನ್ನು ಮಹಿಳೆಯರಿಗೆ ಅರ್ಪಿಸುತ್ತೇವೆ ಎಂದಿದ್ದಾರೆ. ಆದರೆ ನಮಗೆ ಸಮಾನತೆ, ಉದ್ಯೋಗ, ಸುರಕ್ಷತೆ, ರಕ್ಷಣೆ, ನಾವು ನೆಮ್ಮದಿಯಾಗಿ ಬದುಕುವ ಸಮಾಜ ನಿರ್ಮಿಸಿ ಕೊಡುವ ಕಾರ್ಯ ಮಾಡಿ. ನಮ್ಮ ಹಕ್ಕು ನಮಗೆ ಕೊಡಿ. ಮಹಿಳಾ ಮೀಸಲಾತಿ ಜಾರಿಗೆ ತನ್ನಿ ಎಂದು ಹೇಳಿದರು.
ಬಳಿಕ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಎಲ್ಲಾ ಕಾರ್ಯಕರ್ತೆಯರಿಗೂ ಪ್ರಮಾಣಪತ್ರ ವಿತರಿಸಿ ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.