ಬೆಂಗಳೂರು : ಇದೇ ರೀತಿ ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 80 ಸೀಟ್ ಬರಲ್ಲ ಎಂಬ ಕೆಜಿಎಫ್ ಬಾಬು (ಯೂಸುಫ್ ಷರೀಪ್) ಹೇಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರು ಗರಂ ಆದ ಘಟನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ. ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಕೆಜಿಫ್ ಬಾಬು (ಯೂಸುಫ್ ಷರೀಪ್) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದೇ ರೀತಿ ಇದ್ದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ 80 ಸ್ಥಾನವನ್ನೂ ಗೆಲ್ಲಲ್ಲ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿ ಈ ರೀತಿ ಹೇಳಿಕೆ ನೀಡಿದ ಕೆಜಿಎಫ್ ಬಾಬು ವಿರುದ್ಧ ಕಿಡಿಕಾರಿದರು. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣವೂ ಸೃಷ್ಟಿಯಾಯಿತು. ಕೆಜಿಎಫ್ ಬಾಬು ಮಾತಿಗೆ ಕೆರಳಿ ಕೆಂಡವಾದ ಕೈ ನಾಯಕರು ಹಾಗೂ ಕಾರ್ಯಕರ್ತರು ಬಾಬುವನ್ನು ಪ್ರಶ್ನಿಸಿದರು. ಬಾಬುಗೆ ಇಲ್ಲಿ ನಿಂತು ಹೀಗೆಲ್ಲ ಮಾತಾಡಬೇಡ ಎಂದು ಕಾರ್ಯಕರ್ತರು ಗರಂ ಆದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೇ ಆವಾಜ್ ಹಾಕಲು ಹೋದರು. ಪಕ್ಷದ ಅಧ್ಯಕ್ಷರು ಹೆಂಡ್ತಿ ಮಕ್ಕಳು ಎಲ್ಲರನ್ನು ಬಿಟ್ಟು ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಆದರೆ ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿ ಇಲ್ಲ ಎಂದು ಆರೋಪಿಸಿದರು.
ಕಚೇರಿಗೆ ಬಂದವರಿಗೆ ಮರ್ಯಾದೆ ಕೊಡಲ್ಲ: ಇಲ್ಲಿ ಬಂದವರಿಗೆ ಮರ್ಯಾದೆ ಕೊಡಲ್ಲ ಎಂದು ಕೆಜಿಎಫ್ ಬಾಬು (ಯೂಸುಫ್ ಷರೀಪ್) ಏರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು, ಇದನ್ನೆಲ್ಲಾ ಹೋಗಿ ಹೊರಗೆ ಮಾತನಾಡು. ಕೆಪಿಸಿಸಿ ಕಚೇರಿಯಲ್ಲಿ ನಿಂತು ಮಾತನಾಡಬೇಡ ಎಂದು ತಾಕೀತು ಮಾಡಿದರು. ಈ ವೇಳೆ ವಾಗ್ವಾದ ನಡೆದು ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯಿಂದ ಹೊರಗೆ ಕಳುಹಿಸಿದರು.
ಪಕ್ಷದ ಕಚೇರಿಯಲ್ಲಿ ನಿಂತು ಪಕ್ಷಕ್ಕೆ ಚ್ಯುತಿ ಬರುವಂತೆ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು (ಯೂಸುಫ್ ಷರೀಪ್) ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಪತ್ರ ಬರೆದಿದ್ದಾರೆ. ಎಸ್.ಮನೋಹರ್ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿರುವ ಕಾರ್ಯಕರ್ತರಿಂದ ಪತ್ರ ಬರೆದು ಸಹಿ ಹಾಕಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಮಂತ್ರಿಯಾಗಿರುವ ರಣದೀಪ್ ಸುರ್ಜೇವಾಲ ಅವರಿಗೆ ರವಾನೆ ಮಾಡಲಾಗಿದೆ.
ಘಟನೆ ಹಿನ್ನೆಲೆ : ಕೆಲ ತಿಂಗಳ ಹಿಂದೆ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ನಗರದಿಂದ ಸ್ಪರ್ಧಿಸಿದ್ದ ಕೆಜಿಎಫ್ ಬಾಬು (ಯೂಸುಫ್ ಷರೀಪ್) ಚುನಾವಣೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ವಿರುದ್ದ ಸೋತಿದ್ದರು. ಇದಾಗಿ ಕೆಲ ತಿಂಗಳು ಸುಮ್ಮನಿದ್ದ ಇವರು ಚಿಕ್ಕಪೇಟೆ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದರು.
ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ನಾಯಕರನ್ನು ಸಂಪರ್ಕಿಸದ ಹಿನ್ನಲೆ ಪಕ್ಷ ಸಹ ಇವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಪಕ್ಷದ ನಾಯಕರ ಸೂಚನೆಯನ್ನು ಮೀರಿ ಚಿಕ್ಕಪೇಟೆಯಲ್ಲಿ ಸ್ಪರ್ಧಿಸುವ ಪ್ರಯತ್ನ ಮುಂದುವರಿಸಿರುವ ಕೆಜಿಎಫ್ ಬಾಬು, ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿಯೂ ತಿಳಿಸಿದ್ದರು. ಇದರ ಬೆನ್ನಲೆ ಕಾಂಗ್ರೆಸ್ ಪಕ್ಷದ ಅತೃಪ ನಾಯಕ ಕೆಜಿಎಫ್ ಬಾಬು (ಯೂಸುಫ್ ಷರೀಪ್) ಈ ತರಹದ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ನಾನು ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಕೆಜಿಎಫ್ ಬಾಬು