ಬೆಂಗಳೂರು: ''ಅವರ ಪಕ್ಷದ ಲೆಕ್ಕಾಚಾರದಲ್ಲಿ ಆಯ್ಕೆ ಮಾಡಿದ್ದಾರೆ. ಬಿ. ವೈ. ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಪಕ್ಷವಾಗಿ ನಮಗೆ ಸಲಹೆ ಸೂಚನೆ ಕೊಡಲಿ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಸದಾಶಿವ ನಗರದಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ''ನಾವು ತಪ್ಪು ಮಾಡಿದ್ರೆ ಎತ್ತಿ ಹಿಡಿಯಲಿ. ಕ್ಷುಲ್ಲಕ ವಿಚಾರದ ಬಗ್ಗೆ ಮಾತನಾಡಿದ್ರೆ ಒಪ್ಪಲ್ಲ. ಒಳ್ಳೆಯ ರಾಜಕಾರಣದ ವ್ಯವಸ್ಥೆ ಮಾಡಿಕೊಡಬೇಕು. ಆಗ ರಾಜ್ಯದಲ್ಲಿ ಅವರಿಗೆ ಒಳ್ಳೆಯದಾಗುತ್ತದೆ. ನಾನು ಅದನ್ನು ನಿರೀಕ್ಷೆ ಮಾಡುತ್ತೇನೆ. ಮುಂದೆ ನೋಡೋಣ ಹೇಗೆ ಆಗುತ್ತೆ'' ಎಂದು ತಿಳಿಸಿದರು.
ಲಿಂಗಾಯತರು ವಿಜಯೇಂದ್ರ ಬೆನ್ನಿಗೆ ನಿಲ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಬೆಳವಣಿಗೆ ಯಾವ ರೀತಿ ಆಗುತ್ತೆ ಎಂದು ನೋಡಬೇಕು. ಅದಕ್ಕೆ ಪ್ರತಿಯಾಗಿ ನಾವು ಮಾಡಬೇಕಲ್ವಾ? ಕಾದು ನೋಡುತ್ತೇವೆ, ಸೂಕ್ಷ್ಮವಾಗಿ ಗಮಿಸುತ್ತೇವೆ. ಆ ನಂತರ ನಮ್ಮ ರಣ ನೀತಿ ನಾವು ರೂಪಿಸುತ್ತೇವೆ'' ಎಂದರು.
ಪಿಎಸ್ಐ ಮರುಪರೀಕ್ಷೆಗೆ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿ, ''ಸಂಪೂರ್ಣ ಆದೇಶವನ್ನು ನಾನು ನೋಡಿಲ್ಲ. ನಮ್ಮ ಎಜಿ ಜೊತೆ ಮಾತನಾಡಿದ್ದೇನೆ. ಬೇಗ ಪರೀಕ್ಷೆ ಮಾಡುವಂತೆ ಸೂಚಿಸಿದೆ. ಸ್ವತಂತ್ರ ಸಂಸ್ಥೆಯಿಂದ ಮಾಡಿಸುವಂತೆ ಹೇಳಿದೆ. ಆದೇಶ ಕೈ ಸೇರಿದ ಮೇಲೆ ಕ್ರಮ ತೆಗೆದುಕೊಳ್ತೇವೆ. ನಮಗೆ ಓದಲು ಸಮಯ ಕೊಡಿ ಎಂದು ಅಭ್ಯರ್ಥಿಗಳು ಕೇಳ್ತಿದ್ದಾರೆ. ಅದನ್ನು ಪರಿಗಣಿಸುತ್ತೇವೆ ಯಾವ ರೀತಿ ಮಾಡಬೇಕೆಂದು ಗೊತ್ತಿಲ್ಲ. ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಬೇಕು. ತರಬೇತಿ ನೀಡಲು ಒಂದು ವರ್ಷ ಆಗಲಿದೆ. ಹಾಗಾಗಿ ನಾವು ರೂಲ್ 32 ನಲ್ಲಿ ಪ್ರಮೋಟ್ ಮಾಡಿದ್ದೇವೆ. 500, 600 ಎಎಸ್ಐಗಳನ್ನು ಪ್ರಮೋಟ್ ಮಾಡಿದ್ದೇವೆ. 545ರ ಜೊತೆಗೆ ಇನ್ನೂ 400 ಪೋಸ್ಟ್ ಖಾಲಿಯಿದೆ. ಹಾಗಾಗಿ ಒಟ್ಟಿಗೆ ಮಾಡಬೇಕಾ? ಪ್ರತ್ಯೇಕವಾಗಿ ಮಾಡಬೇಕಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.
ಕೆಇಎ ಪರೀಕ್ಷೆ ಅಕ್ರಮ ತನಿಖೆ ಸಿಐಡಿಗೆ ನೀಡುತ್ತೇವೆ: ಕೆಇಎ ಪರೀಕ್ಷೆ ಅಕ್ರಮ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ''ಆರೋಪಿ ಬಂಧನಕ್ಕಾಗಿ ಮೂರು ಟೀಮ್ಗಳು ಒಟ್ಟಿಗೆ ಕೆಲಸ ಮಾಡಿವೆ. ಇಲಾಖೆಯವರಿಗೆ ಅಭಿನಂದನೆಗಳು. ಯಾಕೆಂದರೆ ಒಳ್ಳೆಯ ಕೆಲಸ ತ್ವರಿತವಾಗಿ ಮಾಡಿದ್ದಾರೆ. ಅವರೊಂದಿಗೆ ಬಹಳಷ್ಟು ಚರ್ಚೆಗಳನ್ನು ನಾವು ಮಾಡಿದ್ದೇವೆ. ಇನ್ನೂ 5ರಿಂದ 6 ಕೇಸುಗಳು ಅವರ ಮೇಲಿದೆ. ಪಿಎಸ್ಐ ಹಾಗೂ ಕೆಇಎ ಪರೀಕ್ಷೆಗಳ ಕೇಸ್ ಅನ್ನು ಸಿಐಡಿಗೆ ಕೊಡುತ್ತೇವೆ ಎಂದರು.
ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ