ಬೆಂಗಳೂರು : ಕೋವಿಡ್ ಸಂದರ್ಭ ತಂದೊಡ್ಡಿರುವ ಸವಾಲುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸಿ ಎಂದು ವೈದ್ಯರಿಗೆ ಸಿಎಂ ಯಡಿಯೂರಪ್ಪ ಕರೆ ನೀಡಿದ್ದಾರೆ.
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರೊಂದಿಗೆ ವಿಡಿಯೋ ಸಂವಾದದ ವೇಳೆ ಮಾತನಾಡಿದ ಅವರು, ಕೋವಿಡ್-19ರ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ. ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎಂದರು.
ವೈದ್ಯರು ಸೇವೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪ್ರಶ್ನಿಸಿ, ವೈದ್ಯರಿಗೆ ಸಿಎಂ ಯಡಿಯೂರಪ್ಪ ಆತ್ಮವಿಶ್ವಾಸ ತುಂಬಿದರು. ಲಭ್ಯವಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕತೆಯಿಂದ ಬಳಸಿ.
ಇತರರ ಜೀವ ಉಳಿಸಲು ತಮಗೆ ಬಂದೊದಗಬಹುದಾದ ಅಪಾಯ ಲೆಕ್ಕಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಸಮೂಹವನ್ನು ರಾಜ್ಯದ ಅಮೂಲ್ಯ ಆಸ್ತಿ ಎಂದು ಬಣ್ಣಿಸಿದರು.
ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಈ ವೃಂದಕ್ಕೆ ರಾಜ್ಯದ ಜನತೆಯ ಪರವಾಗಿ ಹಾಗೂ ವೈಯುಕ್ತಿಕವಾಗಿಯೂ ಕೃತಜ್ಞತೆ ಸಲ್ಲಿಸಿದರು.
ಸಿಎಂ ಸಂವಾದದ ಮುಖ್ಯಾಂಶಗಳು:
- ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಡಾ ಲಕ್ಷ್ಮೀಪತಿ ಮಾತನಾಡಿ, ಕೋವಿಡ್ ಪ್ರಾರಂಭವಾದ ದಿನದಿಂದಲೂ ಮನೆಗೆ ತೆರಳದೆ ಆಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿರುವ ತಮ್ಮ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸೇವೆಯನ್ನು ಸಿಎಂ ಗಮನಕ್ಕೆ ತಂದರು.
- ಹೊಸದಾಗಿ ಸರ್ಕಾರ ನಿರ್ಧರಿಸಿರುವ ಅಂತಿಮ ವರ್ಷದ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಹ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.
- ವಿಜಯನಗರ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಡಾ ಶ್ರೀನಿವಾಸುಲು ಮಾತನಾಡಿ, ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು. ಆಮ್ಲಜನಕ ಕೊರತೆ ಇಲ್ಲ, ಜಿಂದಾಲ್ ಸಂಸ್ಥೆಯವರು, 1000 ಹಾಸಿಗೆಯ ಆಸ್ಪತ್ರೆ ಜತೆಗೆ ಮೂಲಸೌಕರ್ಯ ಕಲ್ಪಿಸಿ ಕೊಡುತ್ತಾರೆ. ಅದನ್ನು ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
- ಬಳ್ಳಾರಿಯಿಂದ ಎರಡು ದಿನಕ್ಕೊಮ್ಮೆ 6,000 ಕೆಎಲ್ ಆಮ್ಲಜನಕರ ಸರಬರಾಜು ಆಗುತ್ತಿದೆ. ಜಿಲ್ಲೆಯಲ್ಲಿ ಇತ್ತೀಚಿಗೆ ಒತ್ತಡ ಕಡಿಮೆಯಾಗಿದ್ದು, ಇರುವ ಹಾಸಿಗೆಗಳು ಹಾಗೂ ಸೋಂಕಿತರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಡಾ ಶರತ್ ಬಾಬು ಹೇಳಿದರು.
- ಬೆಳಗಾವಿ ಜಿಲ್ಲೆಯ ಗೋಕಾಕ್ದ ಅರವಳಿಕೆ ತಜ್ಞ ಡಾ.ಮಹಾಂತೇಶ್ ಶೆಟ್ಟಪ್ಪನವರ್ ಮಾತಾನಾಡಿ, ಗ್ರಾಮೀಣ ಮಟ್ಟದಲ್ಲಿ ಹೋಮ್ ಐಸೋಲೇಷನ್ ಹೆಚ್ಚಿಸುವ ಅಗತ್ಯವಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದರು.
- ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಆಸ್ಪತ್ರೆಯ ಡಾ.ದೀಪಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇಕಡಾ 32 ರಷ್ಟು ಇದ್ದು, ಶೀಘ್ರದಲ್ಲಿ ಅದನ್ನು ಶೇ.10ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
- ಕೊರೊನಾ ಕಂಡು ಬಂದರೂ ವೈದ್ಯರನ್ನು ಸಂಪರ್ಕಿಸದೆಯೇ ಸ್ವಯಂ ಚಿಕಿತ್ಸೆ ಪಡೆಯುವ ಪರಿಪಾಠ ಇದೆ. ಇದು ಬದಲಾಗಬೇಕಿದೆ ಎಂದು ಮೈಸೂರಿನ ಡಾ.ತ್ರಿವೇಣಿ ಅಭಿಪ್ರಾಯಪಟ್ಟರು. ಸೋಂಕಿತರು ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಷನ್ ಆಗುವುದು ಒಳ್ಳೆಯದು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.68ರಷ್ಟು ಲಸಿಕೆ ಹಾಕಿರುವುದಾಗಿ ತಿಳಿಸಿದರು.
- ತುಮಕೂರು ಜಿಲ್ಲಾಸ್ಪತ್ರೆಯ ಡಾ.ಭಾನುಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಸೋಂಕು ಹೆಚ್ಚಲು ಹೋಂ ಐಸೊಲೇಷನ್ ಸರಿಯಾಗಿ ಆಗುತ್ತಿಲ್ಲ. ಮೊದಲನೆಯ ಅಲೆಗಿಂತ ಎರಡನೇ ಅಲೆಗೆ ಹಿರಿಯರು ಮಾತ್ರವಲ್ಲ, ಮಧ್ಯ ವಯಸ್ಕರು ಹಾಗೂ ಕಿರಿಯರೂ ಹೆಚ್ಚು ಬಾಧಿತರಾಗುತ್ತಿದ್ದಾರೆ. ತುಮಕೂರು ಜಿಲ್ಲೆ ಬೆಂಗಳೂರಿನ ಪ್ರತಿಬಿಂಬದಂತಿರುವ ಕಾರಣಕ್ಕೆ ಇಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣ ಎಂದರು.
- ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಡಾ.ಧನರಾಜ್ ಅವರು ಕೊರೊನಾ ತೀವ್ರತೆ ಸರಿದೂಗಿಸುವಲ್ಲಿ ಎಲ್ಲಾ ಕ್ರಮಗಳನ್ನು ವಹಿಸಿದ್ದೇವೆ. ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ರೆಮಿಡಿಸಿವಿಯರ್ ಸಮಸ್ಯೆಯನ್ನು ಸರಿದೂಗಿಸಲಾಗಿದೆ ಎಂದು ಹೇಳಿದರು.
- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವೈದ್ಯ ಡಾ.ಗಣೇಶ್ ಭಟ್ ಮಾತನಾಡಿ ತೀರ್ಥಹಳ್ಳಿಯಂಥ ತಾಲೂಕು ಕೇಂದ್ರದಿಂದ ಅವಶ್ಯವಿರುವ ತೀವ್ರ ತೆರನಾದ ರೋಗಿಗಳಿಗೆ ಆ್ಯಂಬುಲೆನ್ಸ್ ಕಾಯ್ದಿರಿಸಲಾಗಿದೆ. ಇದರಿಂದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲು ತೊಂದರೆಯಾಗಿಲ್ಲ. ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಸಮಸ್ಯೆಯಾದಾಗ ಬಹುತೇಕ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನಿಸುವುದು ದೊಡ್ಡ ಸಮಸ್ಯೆಯಾಗಿದ್ದು ಅದಕ್ಕಾಗಿ ಆ್ಯಂಬುಲೆನ್ಸ್ಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು