ಬೆಂಗಳೂರು: ವಿಧಾನಸಭೆಯ ಮೊದಲ ದಿನದ ಕಲಾಪದಲ್ಲಿ ಅಗಲಿದ 30ಕ್ಕೂ ಹೆಚ್ಚು ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಿಎಂ ಬೊಮ್ಮಾಯಿ, ಸ್ಪೀಕರ್ ಕಾಗೇರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದ ನಾಯಕ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವರು ಅಗಲಿದೆ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಿಧನರಾದ ಸಿ.ಎಂ.ಉದಾಸಿ, ಮಾಜಿ ಸಭಾಧ್ಯಕ್ಷರಾಗಿದ್ದ ಕೃಷ್ಣ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಕಲ್ಯಾಣ್ ಸಿಂಗ್, ಕೇಂದ್ರದ ಮಾಜಿ ಸಚಿವರಾಗಿದ್ದ ಬಾಬಾಗೌಡ ಪಾಟೀಲ, ಲೋಕಸಭೆಯ ಮಾಜಿ ಸದಸ್ಯರು ಹಾಗೂ ರಾಜ್ಯದ ಮಾಜಿ ಸಚಿವರಾಗಿದ್ದ ಜಿ. ಮಾದೇಗೌಡ, ರಾಜ್ಯಸಭೆಯ ಮಾಜಿ ಸದಸ್ಯರು ಹಾಗೂ ರಾಜ್ಯದ ಮಾಜಿ ಸಚಿವರಾಗಿದ್ದ ಕೆ.ಬಿ. ಶಾಣಪ್ಪ, ಲೋಕಸಭೆಯ ಮಾಜಿ ಸದಸ್ಯರಾಗಿದ್ದ ಎಸ್.ಜಿ. ಸಿದ್ನಾಳ್, ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ಎಂ. ರಾಜಗೋಪಾಲ್, ರಾಜ್ಯದ ಮಾಜಿ ಸಚಿವರಾಗಿದ್ದ ಪ್ರೊ.ಮುಮ್ತಾಜ್ ಅಲಿಖಾನ್ ಗೆ ಸಂತಾಪ ಸೂಚಿಸಲಾಯಿತು.
ಜೊತೆಗೆ ಎ.ಕೆ. ಅಬ್ದುಲ್ ಸಮದ್, ಮಾಜಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಡಾ.ಸಿದ್ದಲಿಂಗಯ್ಯ, ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ರೇವಣಸಿದ್ದಪ್ಪ ಕಲ್ಲೂರ, ಸದಾಶಿವರಾವ ಬಾಪು ಸಾಹೇಬ ಭೋಸಲೆ, ಡಾ.ಚಿತ್ತರಂಜನ್ ಕಲಕೋಟಿ, ಡಾ: ಜೇಕಬ್ ಪಿ.ಜೆ., ಸೈಯದ್ ಜುಲುಫೀಕರ್ ಹಶ್ಮಿ, ಮಹಮ್ಮದ್ ಲೈಕೊದ್ದೀನ್, ಮನೋಹರ ಕಟ್ಟೀಮನಿ, ಎನ್.ಎಸ್. ಖೇಡ್, ಸೂ.ರಂ.ರಾಮಯ್ಯ ರಾಜಶೇಖರ ಸಿಂಧೂರ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹೆಚ್.ಎಸ್. ದೊರೆಸ್ವಾಮಿ, ಕನ್ನಡ ನಿಘಂಟು ತಜ್ಞರಾದ ಪ್ರೊ. ಜಿ. ವೆಂಕಟಸುಬ್ಬಯ್ಯ, ಹಿರಿಯ ಪತ್ರಕರ್ತರಾಗಿದ್ದ ಮಹದೇವ ಪ್ರಕಾಶ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ. ಎಂ.ಎ. ಹೆಗಡೆ, ಶಿಕ್ಷಣ ತಜ್ಞರಾಗಿದ್ದ ಪ್ರೊ. ಸವದತ್ತಿ, ಪರಿಸರ ಹೋರಾಟಗಾರರಾಗಿದ್ದ ಸುಂದರ್‌ಲಾಲ್ ಬಹುಗುಣ, ಕ್ರೀಡಾಪಟುವಾಗಿದ್ದ ಮಿಲ್ಖಾ ಸಿಂಗ್, ಚಿತ್ರ ನಟಿಯಾಗಿದ್ದ ಜಯಂತಿ, ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್, ಸಾಹಿತಿ ಡಾ. ವಸಂತ ಕುಷ್ಟಗಿ ಮತ್ತು ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು.
ಸಿಎಂ ಅವರಿಂದ ಸಂತಾಪ ಸೂಚನೆ: ಸಿಎಂ ಆಗಿ ಮೊದಲ ಅಧಿವೇಶನ ಎದುರಿಸುತ್ತಿರುವ ಬೊಮ್ಮಾಯಿ ಅಗಲಿದ 30ಕ್ಕೂ ಹೆಚ್ಚು ಗಣ್ಯರಿಗೆ ಸಂತಾಪ ಸೂಚಿಸಿದರು. ಮಾಜಿ ಸಚಿವ ಸಿಎಂ ಉದಾಸಿ ಬಗ್ಗೆ ಮಾತನಾಡುತ್ತಾ, ಅವರು ಮಾತನಾಡಿದರೆ ಬಹಳ ಅರ್ಥಪೂರ್ಣ ಹಾಸ್ಯಭರಿತವಾಗಿ ಇರುತ್ತಿತ್ತು. ಸಿಎಂ ಉದಾಸಿ ಹಸ್ತಾಕ್ಷರ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರಿಂಟ್ ಮಾಡಿದ ರೀತಿ ಇರುತ್ತಿತ್ತು.
ಉದಾಸಿ ಭಾಷಾ ಜ್ಞಾನ ನೆನಪಿಸಿಕೊಂಡ ಸದನ
ಸುಮಾರು ಏಳು ಭಾಷೆಗಳನ್ನು ಉದಾಸಿ ಕಲಿತಿದ್ದರು ಅಷ್ಟೇ ಅಲ್ಲದೇ ಸಾಮಾನ್ಯ ಜ್ಞಾನದ ಮೇಲೆ ರಾಜಕಾರಣ ಮಾಡಿದವರು ಹಾಗೂ ಕಲಿಯುವ ಆಸಕ್ತಿ ಬಹಳ ಇಟ್ಟುಕೊಂಡಿದ್ದರು ಎಂದರು. ಉದಾಸಿ ಹಾಗೂ ಯಡಿಯೂರಪ್ಪ ಅನ್ಯೋನ್ಯವಾಗಿದ್ದು ಅವರು ಪಕ್ಷಕ್ಕೆ ಬರಲು ಯಡಿಯೂರಪ್ಪ ಆತ್ಮೀಯತೆ ಕಾರಣ. ಹಾವೇರಿ ಜಿಲ್ಲೆ ರಚನೆಗೂ ಕೂಡ ಉದಾಸಿ ಕಾರಣರಾಗಿದ್ದು, ಜೆಎಚ್ ಪಟೇಲ್ ಅವರ ಮನವೊಲಿಸಿ ಹಾವೇರಿ ಜಿಲ್ಲೆ ರಚನೆ ಮಾಡಿಸಿದ್ದರು ಎಂದು ನೆನಪಿಸಿಕೊಂಡರು.
ಇದನ್ನೂ ಓದಿ : ವಿಧಾನ ಪರಿಷತ್ ಕಲಾಪ ಆರಂಭ: ಅಗಲಿದ ಗಣ್ಯರಿಗೆ ಸಂತಾಪ ಸೂಚನೆ..!