ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ಭಾಗದಲ್ಲಿ ಸ್ಮಾರ್ಟ್ ಸಿಟಿಯಿಂದ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಜನವರಿ 18ರ ವೇಳೆಗೆ 5 ರಸ್ತೆಗಳಾದ ಹೇಯ್ಸ್ ರಸ್ತೆ, ಮ್ಯಾಗ್ರಾತ್ ರಸ್ತೆ, ರೇಸ್ ಕೋರ್ಸ್ ರಸ್ತೆ, ವುಡ್ ಸ್ಟ್ರೀಟ್ ಹಾಗೂ ಟೇಟ್ ಲೇನ್ ರಸ್ತೆಗಳ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಮುಖ್ಯ ಅಭಿಯಂತರರಾದ ರಂಗನಾಥ್ ನಾಯ್ಕ ಅವರಿಗೆ ಆಡಳಿತಗಾರ ಗೌರವ್ ಗುಪ್ತಾ ಸೂಚನೆ ನೀಡಿದರು.
ಕಳೆದ ತಿಂಗಳು ಡಿಕೆನ್ಸನ್ ರಸ್ತೆ, ಹಲುಸೂರು ರಸ್ತೆ, ರಾಜಭವನ ರಸ್ತೆ, ಕಾಮರಾಜ ರಸ್ತೆಗಳನ್ನು ಪರಿವೀಕ್ಷಣೆ ಮಾಡಿದ್ದು, ಹೇಯ್ಸ್ ರಸ್ತೆ, ಮ್ಯಾಗ್ರಾತ್ ರಸ್ತೆಗಳನ್ನು ನಿನ್ನೆ ತಪಾಸಣೆ ಮಾಡಲಾಯಿತು. ಈ ರಸ್ತೆಗಳಲ್ಲಿ ಈಗಾಗಲೇ ರಸ್ತೆ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೂ ಡಾಂಬರೀಕರಣ ಮಾಡದೇ ಇರುವುದನ್ನು ಗಮನಿಸಿದರು. ವಾಹನ ಸವಾರರಿಗೆ ಸುಗಮ ಸಂಚಾರ ಒದಗಿಸಲು ಅತ್ಯಗತ್ಯವಾಗಿ ಮೊಟರೆಬಲ್ ರಸ್ತೆಯನ್ನು ನೀಡುವುದು ಅವಶ್ಯಕವಾಗಿದ್ದು, ಈಗಾಗಲೇ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲಾಗಿರುವ ರಸ್ತೆಗಳಲ್ಲಿ ಕೂಡಲೇ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸುದ್ದಿಯನ್ನೂ ಓದಿ: ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸಲು ತೀರ್ಮಾನ: ಸಚಿವ ಗೋಪಾಲಯ್ಯ
ಪಾದಚಾರಿ ಮಾರ್ಗಕ್ಕೆ ಕರ್ಬ್ಸ್ ಅಳವಡಿಕೆ, ವಿದ್ಯುತ್ ದೀಪದ ಕಂಬಗಳ ಅಳವಡಿಕೆ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕೂಡಲೇ ಡಾಂಬರೀಕರಣ ಪ್ರಾರಂಭಿಸಿ, ಬೀದಿ ದೀಪಗಳ ಅಳವಡಿಕೆ ಇನ್ನಿತರೆ ಬಾಕಿ ಇರುವ ಕಾರ್ಯವನ್ನು ಕೈಗೊಂಡು ಜನವರಿ 18ಕ್ಕೆ ಮೇಲೆ ತಿಳಿಸಿದ 5 ರಸ್ತೆಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಸಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.