ಬೆಂಗಳೂರು: 2020ರ ಮೊದಲ ದಿನವೇ ಇಸ್ರೋ ತನ್ನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದೇಶಕ್ಕೆ ಸಂತಸದ ವಿಷಯ ತಿಳಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ ಸಿವನ್, 2020ಕ್ಕೆ 25ಕ್ಕೂ ಹೆಚ್ಚು ಬಾಹ್ಯಾಕಾಶ ಉಡಾವಣೆಗಳು ಇವೆ. ಕೇಂದ್ರ ಸರ್ಕಾರ ಚಂದ್ರಯಾನ- 3ಕ್ಕೆ ಸಮ್ಮತಿ ನೀಡಿದೆ. ಚಂದ್ರಯಾನ-3ರ ವೆಚ್ಚ 600 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.
ಕೇಂದ್ರ ಹಸಿರು ನಿಶಾನೆ: ಇಸ್ರೋ ಸಂಸ್ಥೆ ಈಗಾಗಲೇ ಚಂದ್ರಯಾನ-3ರ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಾಜೆಕ್ಟ್ ನಿರ್ದೇಶಕರಾಗಿ ವೀರ ಮುತ್ತುವೇಲು ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ಚಂದ್ರಯಾನ-3ರ ವೆಚ್ಚ 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 250 ಕೋಟಿ ರೂ. ರೋವರ್ ಹಾಗೂ ಉಡಾವಣಾ ವೆಚ್ಚಕ್ಕೆ 315 ಕೋಟಿ ರೂಪಾಯಿಗೆ ತಗುಲಲಿದೆ ಎಂದು ವಿವರಿಸಿದರು.
2020ರ ನವೆಂಬರ್ ರಂದು ನಮ್ಮ ಆಂತರಿಕ ಗುರಿ ಇದೆ. ಆ ಸಮಯಕ್ಕೆ ಸಾಧ್ಯವಾಗದಿದ್ದರೆ 2021ಕ್ಕೆ ಚಂದ್ರಯಾನ-3 ಉಡಾವಣೆ ಮಾಡಲಾಗುವುದು. ಚಂದ್ರಯಾನ-2ರಲ್ಲಿ ಇದ್ದ ಆರ್ಬಿಟರ್ ಅನ್ನು ಚಂದ್ರಯಾನ-3ಕ್ಕೆ ಬಳಿಸಲಾಗುವುದು. ಚಂದ್ರಯಾನ-3ರಲ್ಲಿ ಕೇವಲ ರೋವರ್ ಹಾಗೂ ಲ್ಯಾಂಡರ್ ಇರುತ್ತದೆ ಎಂದು ಇವರು ವಿವರಿಸಿದರು.
ಚಂದ್ರಯಾನ-2 ಮಾಡಬೇಕಿದ್ದ ಪ್ರಯೋಗವನ್ನು ಚಂದ್ರಯಾನ-3 ಮಾಡಲಿದೆ. ಚಂದ್ರಯಾನ-2ರ ಯೋಜನೆಯಂತೆ ವಿಕ್ರಂ ಲ್ಯಾಂಡರ್ ಅಂದ್ಕೊಂಡಂತೆ ಕೊನೆ ಹಂತದಲ್ಲಿ ಸೇಫ್ ಆಗಿ ಇಳಿಯಲಿಲ್ಲ. ಈ ಕಾರಣದಿಂದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಉಡಾವಣೆ ಮಾಡಲಾಗುವುದು ಎಂದರು.
ಇಸ್ರೋ ಸಂಸ್ಥೆ ತಪ್ಪುಗಳಿಂದ ಪಾಠ ಕಲಿಯುತ್ತದೆ. ಹೀಗಾಗಿ ನಾವು ಚಂದ್ರಯಾನ-3ನ್ನ ಹೆಚ್ಚು ಯಾಂತ್ರೀಕೃತ ಮಾಡುತ್ತೇವೆ. ಇಸ್ರೋ ಸಂಸ್ಥೆ ಸದಾಕಾಲ ಪಾರದರ್ಶಕವಾಗಿ ನಡೆದುಕೊಳ್ಳುತ್ತದೆ. ಚಂದ್ರಯಾನ-2ರ ಬಿರುಸಾದ ತಿಳುವಳಿಕೆ ಚಿತ್ರವನ್ನು ಬಿಡುಗಡೆ ಮಾಡಿದ ಹುಡುಗನಿಗೆ ಶುಭಾಶಯ ಕೋರುತ್ತೇನೆ ಹಾಗೂ ಸಂಸ್ಥೆ ತಂತ್ರಗಾರಿಕೆ ದೃಷ್ಟಿಯಿಂದ ಆ ಚಿತ್ರಗಳನ್ನು ಬಿಡುಗಡೆ ಮಾಡಲಿಲ್ಲ ಎಂದು ಇಸ್ರೋ ಮುಖ್ಯಸ್ಥ ಚಿತ್ರದ ಬಿಡುಗಡೆಯ ವಿಷಯದ ಬಗ್ಗೆ ಸಮರ್ಥನೆ ನೀಡಿದರು.
ಇಸ್ರೋ ನಿರ್ಮಿತ ಸ್ಥಳ ಆಧಾರಿತ ಸೇವೆ: ನಾವಿಕ್ ಯೋಜನೆ ಬಗ್ಗೆ ವಿವರಿಸಿದ ಇಸ್ರೋ ಮುಖ್ಯಸ್ಥ, ಇನ್ನೂ ಕೆಲ ದಿನಗಳಲ್ಲಿ ಮೊಬೈಲ್ ಫೋನ್ಗಳಲ್ಲಿ ನಾವಿಕ್ ಸೇವೆ ಪ್ರಾರಂಭವಾಗಲಿದೆ. ಈಗಾಗಲೇ ಕ್ವಾಲ್ ಕಾಮ್ ಸಂಸ್ಥೆ ಇಸ್ರೋ ಜೊತೆ ಕೈಜೋಡಿಸಲಿದೆ. ಜೊತೆಗೆ ಕ್ಷಿಯೋಮಿ (xiaomi) ಫೋನ್ ತಯಾರಕರು ಮುಂದೆ ಬಿಡುಗಡೆ ಮಾಡುವ ಫೋನ್ಗಳಲ್ಲಿ ನಾವಿಕ್ ಚಿಪ್ಗಳನ್ನು ಅಳವಡಿಸುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ವಿವರಿಸಿದರು. ನಾವಿಕ್ ಸೇವೆಗಳು ಕೇವಲ ಭಾರತದಲ್ಲಿ ಮಾತ್ರ ಲಭ್ಯವಿದ್ದು, ಈ ಸೇವೆ ಜಿಪಿಎಸ್ ಸೇವೆಗೆ ಪರ್ಯಾಯವಾಗಲಿದೆ.
4 ಬಾಹ್ಯಾಕಾಶ ಯಾತ್ರಿಗಳ ಆಯ್ಕೆ: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಕಾರ್ಯ ಪ್ರಾರಂಭವಾಗಿದೆ. 4 ಗಗನಯಾತ್ರಿಗಳನ್ನು ಭಾರತೀಯ ವಾಯುಪಡೆಯಿಂದ ಇಸ್ರೋ ಆಯ್ಕೆ ಮಾಡಿದೆ. ಆಯ್ಕೆ ಮಾಡಿದ ನಾಲ್ಕು ಗಗನಯಾತ್ರಿಗಳ ಮೊದಲ ಹಂತದ ಆರೋಗ್ಯ ತಪಾಸಣೆ ಭಾರತದಲ್ಲಿ ಈಗಾಗಲೇ ನಡೆದಿದೆ. ಹೆಚ್ಚಿನ ಆರೋಗ್ಯ ತಪಾಸಣೆಗೆ ಹಾಗೂ ಗಗನಯಾತ್ರೆಯ ತರಬೇತಿಗೆ ರಷ್ಯಾಕ್ಕೆ ಇವರನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೂತುಕುಡಿಯಲ್ಲಿ ಉಡಾವಣಾ ಕೇಂದ್ರ: ಇಸ್ರೋ ಸಂಸ್ಥೆ ವಿಸ್ತರಿಸಲು ಈಗಾಗಲೇ ನಿರ್ಧರಿಸಿದ್ದು, ತಮಿಳುನಾಡಿನ ತೂತುಕುಡಿಯಲ್ಲಿ ಲಘು ಉಪಗ್ರಹ ಉಡಾವಣಾ ಕೇಂದ್ರವನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಈಗಾಗಲೇ ಇಸ್ರೋ ಸಂಸ್ಥೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, 2300 ಎಕರೆ ಜಾಗವನ್ನು ಭೂಸ್ವಾಧೀನ ಗೊಳಿಸಲು ನಿರ್ಧರಿಸಿದೆ. ಲಘು ಉಪ ಗ್ರಹಗಳು ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿವೆ. ಇನ್ಮುಂದೆ ಉಪಗ್ರಹಗಳ ಉಡಾವಣೆ ತೂತುಕುಡಿಯಲ್ಲಿ ಆಗಲಿದೆ ಎಂದರು.
ಇಸ್ರೋ ಸಂಸ್ಥೆ ಕೇಂದ್ರ ಸರ್ಕಾರಕ್ಕೆ 2020-21ರ ವಾರ್ಷಿಕ ಆರೋಗ್ಯಕ್ಕಾಗಿ 14,000 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದೆ. ಸಾಮಾನ್ಯವಾಗಿ ಬೇಡಿಕೆಯಿಟ್ಟ ಹಣ ಪೂರ್ಣವಾಗಿ ದೊರಕುವುದಿಲ್ಲ. ಬೇಡಿಕೆ ಹಣಕ್ಕೆ ಕತ್ತರಿ ಹಾಕಿ ಹಣ ಮಂಜೂರು ಮಾಡಲಾಗುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.
2020ನೇ ಇಸವಿ ಹೊಸ ದರ್ಶಕದ ಮುನ್ನುಡಿಯಾಗಿದೆ. ಈ ದಶಕದ ಮೊದಲ ವರ್ಷ ಇಸ್ರೋ ಸಂಸ್ಥೆ ಮಹತ್ವಾಕಾಂಕ್ಷೆ, ಕನಸುಗಳನ್ನು ಹೊಂದಿದೆ.