ಬೆಂಗಳೂರು : ಹುಬ್ಬಳಿ-ಧಾರವಾಡ ಅವಳಿನಗರ ಉತ್ತರ ಕರ್ನಾಟಕದ ಹೃದಯಭಾಗ. ಧಾರವಾಡ ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿಂದು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳು, ಸಿಆರ್‍ಎಫ್ ಯೋಜನೆ ಕಾಮಗಾರಿಗಳು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಚರ್ಚಿಸಿದರು. ವಿವಿಧ ಯೋಜನೆಗಳಡಿ ರಸ್ತೆಗಳನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗಿರಿಜನ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಿ: ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ನಾಗಾಪುರ ಬುಡಕಟ್ಟು/ಗಿರಿಜನ ಪುನರ್ವಸತಿ ಕೇಂದ್ರದ 280 ಕುಟುಂಬಗಳನ್ನೊಳಗೊಂಡ ಗಿರಿಜನ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 280 ಕುಟುಂಬಗಳಿಗೆ 1340 ಎಕರೆ ಜಮೀನನ್ನು ಕೃಷಿ ಉದ್ದೇಶಕ್ಕಾಗಿ ನೀಡಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಗಿರಿಜನ ಕಲ್ಯಾಣ ಇಲಾಖೆಯ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲಿ ತೋಟಗಾರಿಕೆ ಕೃಷಿ ಬೆಳೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಳೆಯುವ ಮೂಲಕ ಅವರ ಆರ್ಥಿಕ ಮಟ್ಟ ಹೆಚ್ಚಿಸಬೇಕು.
ಈ ಉದ್ದೇಶದಿಂದ ಅವರನ್ನು ರೈತ ಕಂಪನಿಗಳಡಿ ತರುವ ಮೂಲಕ ಅವರಿಗೆ ಅವಶ್ಯಕವಿರುವ ಉತ್ತಮ ಗುಣಮಟ್ಟದ ಕೃಷಿ ಪರಿಕರ, ಉತ್ತಮ ಬೇಸಾಯ ತಂತ್ರಜ್ಞಾನ, ಸುಧಾರಿತ ತಳಿಗಳ ಉತ್ಪಾದನೆ, ಕೊಯ್ಲೋತ್ತರ ತಂತ್ರಜ್ಞಾನ ಅಳವಡಿಕೆ ಹಾಗೂ ಸುಧಾರಿತ ಮಾರುಕಟ್ಟೆ ಸೌಲಭ್ಯ ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ. ಈ ರೈತರಿಗೆ ಸಾಮೂಹಿಕ ನೀರಾವರಿ ಸೌಲಭ್ಯವ ಒದಗಿಸಿ, ಉತ್ತಮ ಬೆಳೆಗಳನ್ನು ಬೆಳೆಯಲು ಸಹಕರಿಸಬೇಕು.
ರೈತ ಉತ್ಪಾದಕ ಸಂಸ್ಥೆ ರಚನೆಗೆ ಕರ್ನಾಟಕ ಸರ್ಕಾರದ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಠ ಕೇಂದ್ರ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಇವರಿಗೆ ಮಾರ್ಗದರ್ಶನ, ಕ್ಷೇತ್ರ ಬೆಂಬಲ, ತರಬೇತಿ ಹಾಗೂ ಸಾಮರ್ಥ್ಯವರ್ಧನೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.