ಬೆಂಗಳೂರು: ಫೆಬ್ರವರಿ ಅಂತ್ಯದೊಳಗೆ 7 ಲಕ್ಷ ಮನೆಗಳನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಇದೊಂದು ಆಂದೋಲನದ ರೀತಿಯಲ್ಲಿ ಕೈಗೊಂಡು ಅಗತ್ಯವಿರುವ ಸಿಬ್ಬಂದಿ ಪೂರೈಸುವುದಾಗಿ ತಿಳಿಸಿದರು. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.
ಎಲ್ಲಾ ಕೆಡಿಪಿ ಸಭೆಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಗೃಹ ನಿರ್ಮಾಣ ಪ್ರಮುಖ ವಿಷಯವಾಗಬೇಕು. ಹಿಂದಿನ ವರ್ಷಗಳ ಮನೆಗಳ ಪೈಕಿ 2 ಲಕ್ಷ ಹೆಚ್ಚಿನ ಮನೆಗಳು ಹಾಗೂ ಪ್ರಸಕ್ತ ಸಾಲಿನ 2 ರಿಂದ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಬೇಕು. ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ಗಳ ಮುಖ್ಯಸ್ಥರ ಸಭೆ ಕರೆದು ಸಾಲ ನೀಡುವ ನಿಯಮಗಳ ಬಗ್ಗೆ ಚರ್ಚಿಸಲು ಸೂಚಿಸಿದರು.
20 ಸಾವಿರ ಮನೆ ನಿರ್ಮಾಣ ಮಾಡಲು ಅನುದಾನದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಒಟ್ಟು 1089 ಕೋಟಿ ಲಭ್ಯವಿದೆ ಎಂದರು. ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ವಸತಿ ಇಲಾಖೆ ಕಾರ್ಯದರ್ಶಿ ಡಾ. ಜೆ.ರವಿಶಂಕರ್, ಗೃಹ ಮಂಡಳಿ ಆಯುಕ್ತೆ ಕವಿತಾ.ಎಸ್.ಮಣ್ಣಿಕೇರಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
(ಓದಿ: ಅನಸ್ತೇಷಿಯಾ ನೀಡದೇ ಐವಿ ಸೆಡೇಷನ್ ಟೆಕ್ನಿಕ್ ಮೂಲಕ ಕ್ಲಿಷ್ಟಕರ ಕಿಡ್ನಿ ಕಲ್ಲು ಶಸ್ತ್ರಚಿಕಿತ್ಸೆ )