ಬೆಂಗಳೂರು: ಬಾರ್ ಹಾಗೂ ಮದ್ಯದ ಅಂಗಡಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಗಳನ್ನು ಅಬಕಾರಿ ಇಲಾಖೆಯು ಪರಿಷತ್‌ನ ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ ಗಮನಕ್ಕೆ ಬಂದಿದೆ. ಈ ಕೃತ್ಯ ಎಸಗಿದವರ ವಿರುದ್ಧ ಪರಿಷತ್ತು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಮದ್ಯದ ಅಂಗಡಿಗಳಿಗೆ ಮಾರಾಟ: ಚಿತ್ರ ಕಲಾವಿದ ಬಿ.ಕೆ.ಎಸ್. ಶರ್ಮಾ ಚಿತ್ರಿಸಿದ ಭುವನೇಶ್ವರಿ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್, ಕನ್ನಡಿಗರ ಒತ್ತಾಸೆಯಂತೆ ಮಾರಾಟ ಮಳಿಗೆಯಲ್ಲಿ ಮಾತ್ರ ಮಾರಾಟಕ್ಕೆ ಇಟ್ಟಿದೆ. ಅಲ್ಲದೇ, ಅಂತರ್ಜಾಲ ತಾಣಗಳಲ್ಲಿ ಎಲ್ಲರ ಕೈಗೆಟಕುವ ರೀತಿಯಲ್ಲಿಯೂ ಸಹ ಲಭ್ಯವಿದೆ ಎಂದೂ ಸಹ ತಿಳಿಸಿತ್ತು. ಆದರೆ ಇದನ್ನು ಕೆಲ ವ್ಯಕ್ತಿಗಳು ಡೌನ್ಲೋಡ್ ಮಾಡಿಕೊಂಡು ಹಂಚಿದ್ದು, ಕನ್ನಡ ಸಾಹಿತ್ಯ ಪರಿಷತ್‌ಗೆ ಮಾಹಿತಿ ಬಂದಿದೆ. ಕೆಲವು ಸಮಾಜಘಾತುಕರು ಕನ್ನಡದ ಹೆಸರಿರುವ ಭುವನೇಶ್ವರಿಯ ಭಾವಚಿತ್ರಗಳನ್ನು ಮದ್ಯದ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಅಬಕಾರಿ ಇಲಾಖೆಯವರೇ ಖುದ್ದು ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಆಯುಕ್ತರಿಗೆ ದೂರು: ಈ ವಿಷಯ ಅರಿತ ತಕ್ಷಣ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಾಗೂ ಅಬಕಾರಿ ಆಯುಕ್ತರಿಗೆ ಕಸಾಪರಿ ದೂರು ನೀಡಿದೆ. ತಕ್ಷಣ ಕನ್ನಡ ತಾಯಿಯ ಭಾವಚಿತ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಂದು ಡಾ.ಮಹೇಶ ಜೋಶಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಕರ್ನಾಟಕ ರತ್ನ ಅರ್ಪಿಸಿದ ಕುಟುಂಬ... ವರ್ಷದ ಬಳಿಕ ಅಶ್ವಿನಿ ಮುಖದಲ್ಲಿ ನಗು