ಬೆಂಗಳೂರು: ಬಿಬಿಎಂಪಿ ದಾಸರಹಳ್ಳಿಯ ಜಾಲಹಳ್ಳಿ ಕ್ರಾಸ್ ಬಳಿ ಇರುವ ರಾಕ್ಲೈನ್ ವೆಂಕಟೇಶ್ ಮಾಲೀಕತ್ವದ 'ರಾಕ್ಲೈನ್ ಮಾಲ್'ನಿಂದ 8.5 ಕೋಟಿ ರೂ. ಆಸ್ತಿ ತೆರಿಗೆ ವಂಚನೆ ಆಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎನ್.ಆರ್ ರಮೇಶ್ ಆರೋಪಿಸಿದ್ದಾರೆ.
ರಾಕ್ಲೈನ್ ಮಾಲ್ನಿಂದ 8.5 ಕೋಟಿ ರೂ. ಆಸ್ತಿ ತೆರಿಗೆ ವಂಚನೆ ಆಗಿದೆ. ಕಟ್ಟಡ ಪ್ರದೇಶದ ವಿಸ್ತೀರ್ಣವನ್ನು 1,22,743 ಚದರ ಅಡಿ ಬದಲಿಗೆ 48,500 ಚದರ ಅಡಿ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅರೋಪಿಸಿ ಎನ್.ಆರ್ ರಮೇಶ್, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಾಗೂ ಬಿಎಂಟಿಎಫ್ಗೆ ದೂರು ಸಲ್ಲಿಸಿದ್ದಾರೆ.
2012 ರಲ್ಲಿ ಕೇವಲ 3,78,016 ರೂ.ಗಳನ್ನು ಪಾವತಿಸುವ ಮೂಲಕ ಪಾಲಿಕೆಗೆ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿದ್ದರು. ನಂತರ 2013, 14,15 ರಲ್ಲಿ ರಾಕ್ಲೈನ್ ವೆಂಕಟೇಶ್ಗೆ ನೋಟಿಸ್ ನೀಡಲಾಗಿತ್ತು. 2 ಕೋಟಿ 3 ಲಕ್ಷದ 74 ಸಾವಿರ ಮೊತ್ತವನ್ನು ಪಾವತಿಸುವಂತೆಯೂ ತಿಳುವಳಿಕೆ ಪತ್ರ ನೀಡಲಾಗಿತ್ತು. ಹೈಕೋರ್ಟ್ನಲ್ಲಿ ಸಹ ರಾಕ್ಲೈನ್ ಹಾಕಿದ ಅರ್ಜಿ ವಜಾಗೊಂಡಿತ್ತು. 2012 ರಿಂದ 21 ರವರೆಗಿನ ತೆರಿಗೆ, ದಂಡ, ಉಪಕರ ಸೇರಿಸಿ 8,51,56,751 ರಷ್ಟು ಆಸ್ತಿ ತೆರಿಗೆಯನ್ನು ಪಾವತಿಸಬೇಕಿದೆ. ಆದರೆ ಹೈಕೋರ್ಟ್ ಸೂಚನೆ ಬಳಿಕವೂ ಪಾಲಿಕೆಯ ಅಧಿಕಾರಿಗಳು ಬಾಕಿ ಆಸ್ತಿ ತೆರಿಗೆ ಹಣ ವಸೂಲಿ ಮಾಡಲು ಮುಂದಾಗಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ದೂರು ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ, ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ಪಾಲಿಕೆ ಆದಾಯಕ್ಕೆ ಯಾರೇ ಮೋಸ ಮಾಡಿದರೂ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.