ಬೆಂಗಳೂರು: ಕಳೆದೆರಡು ದಶಕಗಳಿಂದ ತಲೆಮರೆಸಿಕೊಂಡು ಈಗ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಸಿಸಿಬಿ ಪೊಲೀಸರು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ರವಿ ಪೂಜಾರಿ ಅವರನ್ನು ಸಿಸಿಬಿ ಪೊಲೀಸರು ಫೆ.23 ರಂದು ದಕ್ಷಿಣ ಆಫ್ರಿಕಾದ ಸೆನೆಗಲ್ನಿಂದ ಬೆಂಗಳೂರಿಗೆ ಕರೆತಂದಿದ್ದರು. ಹಲವು ದಿನಗಳ ನಿರಂತರ ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ಎರಡು ಕೇಸ್ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 2007ರ ಫೆ.15ರಂದು ಶಬನಮ್ ಡೆವಲಪರ್ಸ್ ಮಾಲೀಕರಾದ ಶೈಲಜಾ ಮತ್ತು ರವಿ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ರವಿ ಪೂಜಾರಿ ಮೊದಲ ಆರೋಪಿಯಾಗಿದ್ದ. ಇದೇ ಪ್ರಕರಣದಲ್ಲಿ 514 ಪುಟಗಳಿರುವ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಈ ಕೇಸ್ನಲ್ಲಿ 18 ಮಂದಿ ಆರೋಪಿಗಳಾಗಿದ್ದು, 48 ಜನರ ಹೇಳಿಕೆ ಪಡೆದುಕೊಳ್ಳಲಾಗಿದೆ. ವೈಟ್ ಫೀಲ್ಡ್ ದೇವಸ್ಥಾನದ ಟ್ರಸ್ಟಿಯನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ 200 ಪುಟಗಳಿರುವ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.