ಮಹದೇವಪುರ: ಎಸ್.ಎಲ್.ವಿ ಟ್ರಾವೆಲ್ಸ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ದಲಿತನೆಂಬ ಕಾರಣಕ್ಕೆ ಯಾವುದೇ ಸೂಚನೆಯಿಲ್ಲದೆ ರದ್ದು ಮಾಡಲಾಗಿದೆ ಎಂದು ಆರೋಪಿಸಿ ಆರ್.ಪಿ.ಐ.ಸಂಘಟನೆಯ ಉಪಾಧ್ಯಕ್ಷ ಅರುಣ್ ಅವರು ದೂರು ನೀಡಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ಘಟಕದಿಂದ ಮೋಲೆಕ್ಸ್ ಪ್ರೈವೇಟ್ ಇಂಡಿಯಾ ಲಿಮಿಟೆಡ್ ಕಂಪನಿಯ ವಿರುದ್ಧ ವೈಟ್ ಫೀಲ್ಡ್ ವಿಭಾಗ ಮಹದೇವಪುರ ವಲಯದ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಅರುಣ್ ಮಾತನಾಡಿದರು. ವೈಟ್ ಫೀಲ್ಡ್ ನ ಎಸ್.ಎಲ್.ವಿ ಟ್ರಾವೆಲ್ ಅವರಿಂದ ಸದರಿ ಕಂಪನಿಯವರು ಕಾರುಗಳನ್ನು ಗುತ್ತಿಗೆ ಪಡೆದಿದ್ದು, ಆ ಕಾರುಗಳ ಮೇಲೆ ಡಾ. ಅಂಬೇಡ್ಕರ್ ಭಾವಚಿತ್ರ ಹಾಕಲಾಗಿದೆ ಎಂದು ಏಕಾಏಕಿ ಕಾರುಗಳ ಗುತ್ತಿಗೆ ರದ್ದುಪಡಿಸಿದ್ದಾರೆ ಎಂದು ಅವರು ದೂರಿದರು.
ದಲಿತರೆಂಬ ಕಾರಣದಿಂದ ಅವರ ಕಾರುಗಳ ಗುತ್ತಿಗೆಯನ್ನು ರದ್ದುಪಡಿಸಿ ಆ ಕಾರುಗಳ ಚಾಲಕರು ಸಂಕಷ್ಟಕ್ಕೆ ಸಿಲುಕು ಹಾಗೆ ಮಾಡಿದ್ದಾರೆ. ಕಂಪನಿಯ ಆಡಳಿತ ಸಿಬ್ಬಂದಿ ದ್ರುವ, ಮದುಕರ್ ರೈ ಹಾಗು ರಾಜೇಶ್ ರೆಡ್ಡಿ ಇವರು ಮೇಲ್ಜಾತಿಯವರಾಗಿದ್ದು ಕಾರುಗಳ ಮೇಲೆ ಡಾ.ಅಂಬೇಡ್ಕರ್ ಭಾವಚಿತ್ರ ಸಹಿಸದೆ ವಾಹನದ ಟೆಂಡರ್ ರದ್ದುಡಿಸಿದ್ದಾರೆ ಎಂದು ಆರೋಪಿಸಿದರು. ಈ ಕಾರಣಕ್ಕೆ ಅವರ ವಿರುದ್ಧ ಎಸ್ ಸಿ, ಎಸ್ ಟಿ ದೌಜನ್ಯ ಕಾಯ್ದೆ ಅಡಿಯಲ್ಲಿ ಮಹದೇವಪುರ ವಲಯ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಬಂದಿದ್ದೇವೆ ಎಂದು ತಿಳಿಸಿದರು.