ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೆ ಭೂಕಂಟಕ ಎದುರಾಗಿದೆ. ತಮ್ಮ ಅಧಿಕಾರ ಪ್ರಭಾವ ಬಳಸಿಕೊಂಡು ಕಾನೂನು ಬಾಹಿರವಾಗಿ ಸರ್ಕಾರಿ ಜಮೀನು ಮಾರಾಟ ಮಾಡಿರುವ ಆರೋಪ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಹಾಗೂ ವಕೀಲರ ತಂಡ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು ನೀಡಿದೆ.
ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವನಹಳ್ಳಿಯ ಹರಳೂರು ಮತ್ತು ಪೂಲನಹಳ್ಳಿಯ ಕೆಐಎಡಿಬಿಗೆ ಸೇರಿದ 116 ಎಕರೆ ಜಮೀನನ್ನ ಖಾಸಗಿ ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ ಎನ್ನಲಾಗ್ತಿದೆ. 25 ಎಕರೆಗಿಂತ ಹೆಚ್ಚು ಜಮೀನು ಮಂಜೂರು ಮಾಡುವಾಗ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಮೊದಲು ಮನವಿ ಸಲ್ಲಿಸಬೇಕು. ಆದರೆ ಈ ನಿಯಮವನ್ನ ಗಾಳಿಗೆ ತೂರಿ ಖಾಸಗಿ ವಿವಿ ಸ್ಥಾಪಿಸಲು ಜಮೀನು ಮಂಜೂರು ಮಾಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
ಇದನ್ನೂ ಓದಿ: ಬಸ್ ಡೋರ್, ಮೇಲ್ಭಾಗದಲ್ಲಿ ಕುಳಿತು ಅಪಾಯಕಾರಿ ಪ್ರಯಾಣ: ವಿಡಿಯೋ
ಹಿಂದಿನ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಪ್ರತಿ ಎಕರೆಗೆ 1.61 ಕೋಟಿ ದರ ನಿಗದಿ ಪಡಿಸಿದ್ದರು. ಆದರೆ, 116.16 ಎಕರೆ ಜಾಗವನ್ನ 50 ಕೋಟಿಗೆ ಮಂಜೂರು ಮಾಡಿದ್ದಾರೆ. ನಿಗದಿ ಪಡಿಸಿರುವ ಮಾರ್ಗಸೂಚಿ ದರದಂತೆ 186.76 ಕೋಟಿಗೆ ನೀಡದೆ ಕೇವಲ 50 ಕೋಟಿ ರೂಪಾಯಿಗೆ ಮಂಜೂರು ಮಾಡಲಾಗಿದೆ. ಸಿಎಂ ಆಗಿದ್ದ ಅವಧಿಯಲ್ಲಿ ಬಿಎಸ್ವೈ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಜಮೀನು ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.