ಬೆಂಗಳೂರು: ಹಣ ವಂಚನೆ ಮಾಡಿರುವುದಾಗಿ ಆರೋಪಿಸಿ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ವಿರುದ್ಧ ಸಿಸಿಬಿಗೆ ರಾಕೇಶ್ ಮಲ್ಲಿ ಎಂಬುವರು ದೂರು ನೀಡಿದ್ದರು. ಸಿಸಿಬಿಗೆ ಎಫ್ಐಆರ್ ಹಾಕುವ ಅವಕಾಶ ಇಲ್ಲದ ಕಾರಣ ದೂರುದಾರರಿಗೆ ಪೊಲೀಸ್ ಠಾಣೆಗೆ ದೂರು ನೀಡಲು ತಿಳಿಸಿತ್ತು.
ಸದ್ಯ ದೂರುದಾರ ರಾಕೇಶ್ ಮುತ್ತಪ್ಪ ರೈ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಕಾರಣ ಮುತ್ತಪ್ಪ ರೈ ಹಾಗೂ ಕುಟುಂಬದವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದೆ.
ಕಾಂಗ್ರೆಸ್ ಲೇಬರ್ ಯೂನಿಯನ್ ಮಾಜಿ ಅಧ್ಯಕ್ಷ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಜೊತೆ ಹಲವು ವರ್ಷಗಳಿಂದ ನಂಟು ಹೊಂದಿದ್ದರು. ಹತ್ತು ವರ್ಷಗಳ ಹಿಂದೆ ಬಂಟ್ವಾಳದಲ್ಲಿ ಇಬ್ಬರು ಜೊತೆಗೂಡಿ 17.5 ಎಕರೆ ಜಮೀನು ಖರೀದಿಸಿ ನಿವೇಶನಗಳಾಗಿ ಪರಿವರ್ತಿಸಿದ್ದರು. 180 ಸೈಟುಗಳ ಪೈಕಿ ಸುಮಾರು 70 ನಿವೇಶನ ಮಾರಾಟವಾಗಿವೆ. ಹೀಗಿದ್ದರೂ ಇದುವರೆಗೂ ನನಗೆ ಮುತ್ತಪ್ಪ ರೈ ಅವರು ಹಣ ಕೊಟ್ಟಿಲ್ಲ ಎಂದು ಮಲ್ಲಿ ಆರೋಪಿಸಿದ್ದಾರೆ. ಹಣದ ವಿಚಾರಕ್ಕಾಗಿ ಪ್ರಶ್ನಿಸಿದರೆ ಮುತ್ತಪ್ಪ ರೈ ಬೆಂಬಲಿಗರು ಹಾಗೂ ಸಂಬಂಧಿಕರಿಂದ ಜೀವಬೆದರಿಕೆ ಹಾಕಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸುವಂತೆ ಸಿಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಸದ್ಯ ಸದಾಶಿವನಗರ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದೆ.