ಬೆಂಗಳೂರು: ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಕರ್ತವ್ಯದಲ್ಲಿದ್ದಾಗ ಕೋವಿಡ್-19ನಿಂದ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಸಾರಿಗೆ ಇಲಾಖೆಯಿಂದ 30 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಇಂದಿನಿಂದ ಸಾರಿಗೆ ಸಂಸ್ಥೆಗಳ ಬಸ್ಗಳು ಕಾರ್ಯನಿರ್ವಹಿಸಲಿದ್ದು, ಈ ಸಂದರ್ಭದಲ್ಲಿ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಸಾರಿಗೆ ಸಂಸ್ಥೆಗಳ ಎಲ್ಲಾ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಗಮನಹರಿಸುವ ಮೂಲಕ ಕೋವಿಡ್-19 ತಡೆಗಟ್ಟಲು ಸಹಕರಿಸಬೇಕು ಎಂದು ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಪ್ರಯಾಣಿಕರು ಕೂಡ ಬಸ್ಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಕೋರಿದ್ದಾರೆ.