ಬೆಂಗಳೂರು: ವಿಮೆ ಹೊಂದಿರುವ ವಾಹನ ನಿಂತಿರುವ ಸಂದರ್ಭದಲ್ಲಿ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದರೂ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2009ರಲ್ಲಿ ಮೃತರಾದ ಚಾಲಕನ ಉತ್ತರಾಧಿಕಾರಿಗಳಿಗೆ ವಿಮಾ ಕಂಪನಿ ಶೇ.12ರ ಬಡ್ಡಿ ಸಹಿತ ಪರಿಹಾರ ನೀಡುವಂತೆ ವರ್ಕ್‌ಮನ್ಸ್ ಕಾಂಪೋನ್ಸೇಷನ್ ಕಮಿಷನರ್ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿಯ ವಿಭಾಗೀಯ ವ್ಯವಸ್ಥಾಪಕರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾ ಮಾಡಿರುವ ನ್ಯಾ. ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ವರ್ಕ್‌ಮನ್ಸ್ ಕಮಿಷನ್ ಆದೇಶವನ್ನು ಎತ್ತಿ ಹಿಡಿದಿದೆ.
ಪ್ರಕರಣ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾ ಕಂಪನಿ ಚಾಲಕ ಕರ್ತವ್ಯದಲ್ಲಿ ಸಾವನ್ನಪ್ಪಿದ್ದರೂ ಆತ ಮಾದಕ ದ್ರವ್ಯ ಸೇವಿಸುತ್ತಿದ್ದನೆಂದು ಆರೋಪಿಸಿತ್ತು. ಆದರೆ ಆತ ಮಾದಕ ದ್ರವ್ಯ ಸೇವಿಸುತ್ತಿದ್ದ, ಮದ್ಯಪಾನ ಮಾಡಿದ್ದ ಎಂಬುದಕ್ಕೆ ಪುರಾವೆ ನೀಡಿರಲಿಲ್ಲ. ಜೊತೆಗೆ ಮರಣೋತ್ತರ ಪರೀಕ್ಷೆಯಲ್ಲೂ ಆ ಅಂಶದ ಉಲ್ಲೇಖವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಚಾಲಕನದ್ದು ಸಹಜ ಸಾವು, ಹಾಗಾಗಿ ಪರಿಹಾರ ನೀಡುವುದಿಲ್ಲ ಎಂಬ ಅಂಶವನ್ನು ಒಪ್ಪಲಾಗದು. ಆದರೆ ಪರಿಹಾರ ಕೋರಿರುವವರು ಚಾಲಕ ಕೆಲಸದ ಒತ್ತಡದಿಂದಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಹಾಗಾಗಿ ಪರಿಹಾರ ನೀಡಲೇಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಲಾರಿ ಚಾಲಕರಾಗಿದ್ದ ಈರಣ್ಣ ಎಂಬುವರು ಸುರತ್ಕಲ್ ಸಮೀಪದ ಇದ್ಯಾ ಗ್ರಾಮದ ಬಳಿ ಲಾರಿ ನಿಲ್ಲಿಸಿ ವಾಹನದಲ್ಲಿಯೇ ಇದ್ದರು. ಆ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತರ ಅಪ್ರಾಪ್ತ ಮಕ್ಕಳು ಪರಿಹಾರ ಕೋರಿ ವಿಮಾ ಕಂಪನಿ ವಿರುದ್ಧ ವರ್ಕ್‌ಮನ್ಸ್ ಕಾಂಪೋನ್ಸೇಷನ್ ಕಮಿಷನರ್ ಎದುರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕಮಿಷನ್ ಆಯುಕ್ತರು, 2009ರಲ್ಲಿ ಶೇ.12ರ ಬಡ್ಡಿ ಸಹಿತ 3.30 ಲಕ್ಷ ರೂ. ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿದ್ದರು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ, ಚಾಲಕ ಹೃದಯಾಘಾತವಾದಾಗ ವಾಹನ ಚಾಲನೆ ಮಾಡುತ್ತಿರಲಿಲ್ಲ, ಹಾಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು.
ಇದನ್ನೂ ಓದಿ: ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಸುವ ಕುರಿತು ಸರ್ಕಾರಕ್ಕೆ ನಿರ್ದೇಶನ ಕೋರಿ ಪಿಐಎಲ್