ಬೆಂಗಳೂರು: ಬಿಜೆಪಿಗೆ ಬರಲು ಇತರ ಪಕ್ಷಗಳ ನಾಯಕರು ಸಿದ್ಧರಾಗಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತು ಸಮಿತಿ ರಚಿಸಿ ನಂತರ ಸೇರಿಸಿಕೊಳ್ಳಲಾಗುತ್ತದೆ. ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಅವಲೋಕನ ಮಾಡಲಾಯಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಕೋರ್ ಕಮಿಟಿ ಸಭೆ ನಂತರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ನಮಗೆ ಒಂದು ಆತ್ಮವಿಶ್ವಾಸ ವ್ಯಕ್ತವಾಗಿದೆ. ಕಳೆದ ಬಾರಿ ಆಗಿದ್ದಂತೆ 104 ಸ್ಥಾನಕ್ಕೆ ಸೀಮಿತ ಆಗಬಾರದು. ನಮ್ಮ ಗುರಿ 120 ಸ್ಥಾನ ಇದೆ, ಅದನ್ನು ದಾಟಲು ಯಾವ ಯಾವ ಮಾನದಂಡ ಬೇಕು ಎನ್ನುವ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾರ್ಗದರ್ಶನದಂತೆ ರೋಡ್ ಮ್ಯಾಪ್ ತಯಾರಿಸಲಿದ್ದಾರೆ. ಚುನಾವಣೆಗೆ ಗೆಲ್ಲಲು ಬೇಕಾದ ಎಲ್ಲ ಸಿದ್ಧತೆ ಮಾಡುತ್ತೇವೆ ಎಂದರು.
ಬೇರೆ ಪಕ್ಷಗಳಿಂದ ಬಿಜೆಪಿ ಬರಲಿದ್ದಾರೆ: ನಮ್ಮ ಪಕ್ಷಕ್ಕೆ ಶಕ್ತಿ ಇರುವವರು, ಸಮಾಜದ ಬಗ್ಗೆ ಕಳಕಳಿ ಇರುವವರು ಯಾರು ಯಾರು ಇದ್ದಾರೆ ಅವರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ. ಅನ್ಯ ಪಕ್ಷಗಳಿಂದ ಕೆಲವರು ನಮ್ಮ ಪಕ್ಷಕ್ಕೆ ಬರುವವರು ಇದ್ದಾರೆ. ಯಾರು ಯಾರನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ರಾಜ್ಯದ ಅಧ್ಯಕ್ಷರು ಒಂದು ಸಮಿತಿಯನ್ನು ರಚಿಸಲಿದ್ದಾರೆ. ಅವರು ಬರುವವರ ಜೊತೆ ಮಾತುಕತೆ ನಡೆಸಿ, ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿ ಸೇರಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಹತಾಶವಾಗಿರುವ ಕಾಂಗ್ರೆಸ್: ಹತಾಶವಾಗಿರುವ ಬೇರೆ ಬೇರೆ ಪಕ್ಷದವರು ಬಿಜೆಪಿ ಕಡೆ ನೋಡುತ್ತಿದ್ದಾರೆ. ಅವರು ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು, ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದರೆ ಅದು ಬಿಜೆಪಿ ಎಂದುಕೊಂಡಿದ್ದಾರೆ. ಹಾಗಾಗಿ ಯಾರನ್ನು ಸೇರಿಸಿಕೊಳ್ಳಬೇಕು ಬಿಡಬೇಕು ಎಂದು ಪಕ್ಷ ತೀರ್ಮಾನಿಸಲಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದವರು ಹತಾಶವಾಗಿದ್ದಾರೆ ಎಂದರು.
ಇದನ್ನೂ ಓದಿ: ಗ್ರಾಮಗಳಿಗೆ ಸಹಕಾರಿ ಆಂದೋಲನ ಕೊಂಡೊಯ್ಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಅಮಿತ್ ಶಾ
ಯಾವುದೇ ಆತ್ಮಾವಲೋಕನ ಆಗಿಲ್ಲ. ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಒಂದು ವಿಶ್ವಾಸದ ವಾತಾವರಣದಲ್ಲಿ ಚರ್ಚೆ ನಡೆದಿದೆ, ವಿಶ್ವಾಸದ ವಾತಾವರಣದಲ್ಲೇ ನಾವು ಚುನಾವಣೆ ಎದುರಿಸಿದ್ದೇವೆ. ಪಂಚರಾಜ್ಯಗಳ ಚುನಾವಣೆ ನಂತರ ದೇಶದ ರಾಜಕೀಯದಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ಕಂಗಾಲಾಗಿದೆ. ಬಿಜೆಪಿ 150 ಸ್ಥಾನ ಗೆಲ್ಲಲು ಬೇಕಾದ ಗ್ರೌಂಡ್ ವರ್ಕ್ ಮಾಡಿ, ರೋಡ್ ಮ್ಯಾಪ್ ತಯಾರು ಮಾಡಲಿದ್ದೇವೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.