ಬೆಂಗಳೂರು: ಕೊರೊನಾ ಸೋಂಕು ಹತ್ತಿಕ್ಕಲು ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಹಾಗೂ ವಿಕೆಂಡ್ ಕರ್ಫ್ಯೂ ಜಾರಿ ಆದೇಶ ಇಂದು ರಾತ್ರಿ 9 ಗಂಟೆಯಿಂದಲೇ ಅನ್ವಯವಾಗಲಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಗೃಹ ಸಚಿವರ ಸಭೆಯಲ್ಲಿ ಪಾಲೊಂಡು ಚರ್ಚೆ ನಡೆಸಲಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಜನಸಂದಣಿ ನಿಯಂತ್ರಣ, ಕೊರೊನಾ ಶಿಷ್ಟಾಚಾರ ಪಾಲನೆ, ಸಾರ್ವಜನಿಕರಲ್ಲಿ ಜಾಗೃತಿ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಕೊಳ್ಳುವುದು ಸದ್ಯ ಅನಿವಾರ್ಯತೆ. ಹೀಗಾಗಿ ಬಿಗಿಯಾಗಿ ನೈಟ್ ಕರ್ಫ್ಯೂ ಜಾರಿಗೊಳಿಸುವ ನಿಟ್ಟಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.
ಕರ್ಫ್ಯೂ ಯಶಸ್ವಿ ಜಾರಿ ಸಂಬಂಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಐಪಿಸಿ ಸೆಕ್ಷನ್ 144 ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು. ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ ಅಂಥವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಸಮಾಲೋಚನೆ ನಡೆಯಲಿದೆ.
ಅನಗತ್ಯವಾಗಿ ವಾಹನ ಸವಾರರು ಒಡಾಡುವುದು ಕಂಡುಬಂದರೆ ದಂಡ ಅಥವಾ ವಾಹನ ಸೀಜ್ ಮಾಡಲು ಸೂಚನೆ ನೀಡುವ ಸಾಧ್ಯತೆಯಿದೆ. ಚರ್ಚೆ ಬಳಿಕ ಕರ್ಫ್ಯೂ ಉಲ್ಲಂಘನೆ ಕುರಿತು ಕ್ರಮದ ಬಗ್ಗೆ ಅಧಿಕೃತ ಮಾಹಿತಿ ಸಚಿವರು ಅಥವಾ ಬೆಂಗಳೂರು ಕಮೀಷನರ್ ಕಮಲ್ ಪಂತ್ ನೀಡುವ ನಿರೀಕ್ಷೆ ಇದೆ.