ಬೆಂಗಳೂರು: ದೇಶ ಕಾಯುವ ಕೆಲಸ ಮಾಡಿದ್ದ ನೌಕಾದಳದ ನಿವೃತ್ತ ಕಮಾಂಡರ್ ಮತ್ತು ಅವರ ಕುಟುಂಬ, ಕೂಲಿ ಕಾರ್ಮಿಕರಿಗೆ ಕೊಡಬೇಕಿದ್ದ 2 ಲಕ್ಷ ರೂಪಾಯಿ ಕೂಲಿ ಹಣವನ್ನು ನೀಡದೆ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ನ್ಯಾಷನಲ್ ಗೇಮ್ಸ್ ವಿಲೇಜ್ ಕ್ಯಾಂಪಸ್ನಲ್ಲಿ ವಾಸವಿರುವ ನೌಕಾದಳದ ನಿವೃತ್ತ ಕ್ಯಾಪ್ಟನ್ ಉದಯ್ ಕುಮಾರ್ 2 ಲಕ್ಷ ರೂಪಾಯಿ ಹಣವನ್ನು ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ 8 ತಿಂಗಳಿನಿಂದ ರಾಯಚೂರು ಮೂಲದ ಶಿವಪ್ಪ ಮಡಿವಾಳ, ಎಲ್ಲಪ್ಪ ಮತ್ತವರ 15 ಜನರ ತಂಡದಿಂದ ಮನೆ ನವೀಕರಣದ ಕಾಮಗಾರಿ ಕೆಲಸ ಮಾಡಿಸಿಕೊಂಡು ಇದೀಗ ದುಡ್ಡು ನೀಡುತ್ತಿಲ್ಲ. ಕೋರಮಂಗಲದ ಎನ್ಜಿವಿಯಲ್ಲಿ ಮನೆ ನವೀಕರಣ ಕೆಲಸಕ್ಕೆ ಪೀಸ್ ವರ್ಕ್ ರೂಪದಲ್ಲಿ 7 ಲಕ್ಷಕ್ಕೆ ಒಪ್ಪಂದವಾಗಿತ್ತು. ಕಾರ್ಮಿಕರೆಲ್ಲಾ ರಾಯಚೂರು ಕಡೆಯವರಾಗಿದ್ದು, ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ನೆಲಸಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.
ಕೋರಮಂಗಲ ಪೊಲೀಸರು ಮೂರು ಬಾರಿ ಅವರನ್ನು ಕರೆಸಿ ಮಾತನಾಡಿಸಿ ಹಣ ಕೊಡಿಸುವ ಭರವಸೆ ನೀಡಿದ್ದರು. ಆದರೀಗ ತಿಂಗಳಾಗುತ್ತಾ ಬಂದರೂ ಶಿವಪ್ಪ, ಎಲ್ಲಪ್ಪರವರ ಕುಟುಂಬ ಹಣವಿಲ್ಲದೆ ಪೊಲೀಸ್ ಠಾಣೆಗೆ ಬರುವಂತಾಗಿದೆ. ಇನ್ನು ಹಣ ಕೇಳಿದ್ದಕ್ಕೆ ಉದಯ್ ಕುಮಾರ್ ಮತ್ತು ಆತನ ಹೆಂಡತಿ ಪೊಲೀಸರ ಎದುರೇ ನಮ್ಮನ್ನ ಹೊಡೆಯಲು ಬರ್ತಾರೆ. ದುಡಿದ ಹಣ ನೀಡದೆ ಮೊಂಡುತನ ಮಾಡುತ್ತಿರುವ ಉದಯ್ ಕುಮಾರ್ ಸೋಂದಿ ಮತ್ತು ಅವರ ಹೆಂತಿಯಿಂದ ನಮಗೆ ಹಣ ಕೊಡಿಸಿ ಎಂದು ಎಲ್ಲಪ್ಪ, ಶಿವಪ್ಪ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ದೂರು ಸಲ್ಲಿಸಿದ್ದಾರೆ.