ಮೈಸೂರು : ವರ್ಗಾವಣೆಗೆ ನೇರವಾಗಿ ನನ್ನ ಬಳಿ ಬನ್ನಿ, ದಲ್ಲಾಳಿಗಳು ಬೇಡ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಮೈಸೂರಿನ ಜಿ.ಪಂ ಸಭಾಂಗಣದಲ್ಲಿ ಇಂದು ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ನನ್ನ ಬಳಿಗೆ ಬನ್ನಿ. ಅನುಕೂಲ ಮಾಡಿ ಕೊಡೋಣ. ಆದರೆ ಈ ವಿಚಾರದಲ್ಲಿ ಮಧ್ಯವರ್ತಿಗಳು ಬೇಡ. ಏನೇ ಸಮಸ್ಯೆ ಇದ್ದರೂ ಕೂಡ ಹೇಳಿ ಎಂದು ಇಲಾಖೆ ಇಂಜಿನಿಯರ್‌ಗಳಿಗೆ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣ ಆಗುವುದರ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಕಾಗದದ ಮೇಲಿನ ಪ್ರಗತಿಯನ್ನು ಒಪ್ಪಲು ಸಾಧ್ಯವಿಲ್ಲ. ವಾಸ್ತವದ ನೆಲೆಯಲ್ಲಿ ಪ್ರಗತಿ ಆಗಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಇಲಾಖೆ ಇಂಜಿನಿಯರ್‌ಗಳಿಗೆ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿದರೆ ಸಮಸ್ಯೆಯ ವಾಸ್ತವದ ಸ್ಥಿತಿಗತಿ ತಿಳಿಯುತ್ತದೆ. ಪರಿಹಾರ ಕಂಡು ಹಿಡಿಯಲು ಸುಲಭವಾಗುತ್ತದೆ ಎಂದು ಸಚಿವರು ಸಲಹೆ ನೀಡಿದರು.
ತಮಗೆ ನೀಡುವ ಮಾಹಿತಿ ವಾಸ್ತವತೆಯಿಂದ ಕೂಡಿರಬೇಕು, ಕಾಗದ ಮೇಲಿನ ಅಂಕಿ- ಅಂಶಗಳನ್ನು ನಂಬುವುದಿಲ್ಲ. ಮಳೆಗಾಲ ಆರಂಭವಾಗಿದ್ದು, ಕೆರೆಗಳ ದುರಸ್ತಿ ಕೆಲಸ ತ್ವರಿತವಾಗಿ ಆಗಬೇಕು. ಕೆರೆಗಳು ಒಡೆದರೆ ಬಡ ರೈತರಿಗೆ ತೊಂದರೆಯಾಗುತ್ತದೆ. ಕೆರೆ- ಕಟ್ಟೆಗಳು ಮತ್ತು ಏತ ನೀರಾವರಿ ಮೂಲಕ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಬೇಕು. ಸರ್ಕಾರ ಮತ್ತು ಇಲಾಖೆ ನಡುವೆ ಸಮನ್ವಯತೆ ಇದ್ದರೆ ಮಾತ್ರ ಸುಲಭವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯ. ಹಿಂದೆ ತಪ್ಪುಗಳು ಆಗಿದ್ದರೆ ಸರಿಪಡಿಸಿಕೊಂಡು ಹೋಗಬೇಕು. ವಿಶೇಷ ಘಟಕ ಯೋಜನೆ ಅಡಿ ಅಂತರ್ಜಲ ಅಭಿವೃದ್ಧಿ ಮತ್ತು ಏತ ನೀರಾವರಿ ಯೋಜನೆಗಳ ಪುನರ್ಜೀವನಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಬಗ್ಗೆ ನಿರ್ಲಕ್ಷ ಸಲ್ಲುದು ಎಂದು ಬೋಸರಾಜು ಇಂಜಿನಿಯರ್‌ಗಳಿಗೆ ಸೂಚಿಸಿದರು.
ಬಿಲ್ ಪಾವತಿ : ಈಗ ತಮ್ಮ ಇಲಾಖೆಯಿಂದ ಸಾವಿರಾರು ಕೋಟಿ ರೂಪಾಯಿ ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ನಡುವೆ ಹೊಸ ಯೋಜನೆಗಳನ್ನು ಆರಂಭಿಸಬೇಕಿದೆ. ಬಾಕಿ ಬಿಲ್ ಅನ್ನು ಜೇಷ್ಠತೆ ಮೇರೆಗೆ ವ್ಯವಸ್ಥಿತವಾಗಿ ನೀಡಬೇಕು. ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯ ಇಂಜಿನಿಯರ್‌ಗೆ ಸೂಚಿಸಿ, ವಸ್ತು ಸ್ಥಿತಿಯಿಂದ ಕೂಡಿದ ವರದಿ ನೀಡಬೇಕು. ಕಠಿಣ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಕಾಮಗಾರಿಗಳ ಬಿಲ್ ಪಾವತಿ ಪಾರದರ್ಶಕವಾಗಿರಬೇಕು. ಹೊಸ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜನರ ನಿರೀಕ್ಷೆಯಂತೆ ನೆಲಮಟ್ಟದ ಸಮಸ್ಯೆಯನ್ನು ಅರಿತು ಕೆಲಸ ಮಾಡಬೇಕು ಎಂದು ಸಚಿವ ಬೋಸರಾಜು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್ ಕಿಶೋರ್ ಮತ್ತು ಮಂಗಳೂರು, ಹಾಸನ, ಮೈಸೂರು, ಚಿಕ್ಕಮಂಗಳೂರು, ಚಾಮರಾಜನಗರ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಖರ್ಚಾಗದ ಅನುದಾನ ಹಿಂಪಡೆಯಿರಿ : ಮತ್ತೊಂದೆಡೆ, ಮೈಸೂರಿನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೋಸರಾಜು ಮಾತನಾಡಿ, ಮೈಸೂರು, ಹಾಸನ, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ವಿಜ್ಞಾನ ಕೇಂದ್ರ ಹಾಗೂ ಪ್ಲ್ಯಾನಿಟೋರಿಯಮ್ ಗಳ ನಿರ್ಮಾಣ ಮಾಡಲು ಅನುದಾನ ನೀಡಿದರೂ ಕೂಡ ಏಕೆ ಖರ್ಚು ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ಮೈಸೂರು ವಿಭಾಗದಲ್ಲಿ ಸರ್ಕಾರದ ಅನುದಾನ ಪಡೆದು ನಡೆಯುತ್ತಿರುವ ವಿಜ್ಞಾನ ಕೇಂದ್ರ, ಪ್ಲ್ಯಾನಿಟೋರಿಯಂ, ಮತ್ತು ಧಾಮ ಗಳಿಗೆ ಖರ್ಚು ಮಾಡದ ಅನುದಾನ ಹಿಂಪಡೆಯಬೇಕು ಎಂದು ವಿಜ್ಞಾನ, ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ವಿವಿಧ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳಿಗೆ ನೀಡಿದ ಭೂಮಿಯನ್ನು ಇಲಾಖೆ ಹೆಸರಲ್ಲಿ ಪಡೆದು ದಾಖಲೆ ಇಡಬೇಕು ಹಾಗೂ ವಿಜ್ಞಾನ ಕೇಂದ್ರ ಮತ್ತು ಪ್ಲ್ಯಾನಿಟೋರಿಯಂ ವಿದ್ಯಾರ್ಥಿಗಳಿಗೆ ಉಪಯೋಗ ಆಗುವ ರೀತಿಯಲ್ಲಿ ನಡೆಸಿ ಎಂದು ಸೂಚಿಸಿದರು. ಮಂಗಳೂರು ಪಿಲಿಕುಳ ಪಕ್ಚಿಧಾಮ 356 ಎಕರೆ ಇದ್ದು ಖಾಸಗಿ ಸಂಸ್ಥೆ ಗಳ ನಿರ್ವಹಿಸುತ್ತಿರುವುದು ಸರಿ. ಆದರೆ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಹೆಸರಲ್ಲಿ ನೋಂದಾಯಿಸಿ ಎಂದು ಹೇಳಿದರು.
ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲು ಹಣ ನೀಡಿದರೂ ಕೂಡ ನಿವೇಶನವನ್ನು ಇಲಾಖೆಗೆ ನೋಂದಾವಣಿ ಮಾಡಲು ಆಗುವುದಿಲ್ಲ ಎಂದು ವಿ. ವಿ. ಕುಲಸಚಿವರು ಸಭೆಯಲ್ಲಿ ತಿಳಿಸಿದರು. 1965ರಲ್ಲಿ ಮೈಸೂರು ಮಹಾರಾಜರು ರಾಷ್ಟ್ರಪತಿಗಳ ಹೆಸರಲ್ಲಿ ಒಟ್ಟು ಆವರಣ ನೀಡಿದ್ದಾರೆ. ಹಾಗಾಗಿ ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದಾಗ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆದು ಕಾಮಗಾರಿ ಆರಂಭಿಸಬಹುದು ಬೋಸರಾಜು ಸೂಚಿಸಿದರು.
ಸಭೆ ಬಳಿಕ ಸಚಿವರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗಕ್ಕೆ ಭೇಟಿ ನೀಡಿ. ಸಂಚಾರಿ ವಿಜ್ಞಾನ ವಸ್ತು ಪ್ರದರ್ಶನ ವಾಹನ ವೀಕ್ಷಿಸಿದರು. ನಂತರ ಜರುಗಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ರೀತಿಯಲ್ಲಿ ತಮ್ಮ ಇಲಾಖೆ ಅನುದಾನ ನೀಡಲಿದೆ ಎಂದರು. ಸಭೆಯಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜು, ವಿಶ್ವವಿದ್ಯಾಲಯ ಕುಲಸಚಿವೆ ಶೈಲಜಾ ಇದ್ದರು.
ಇದನ್ನೂ ಓದಿ : ಐಟಿ ಕಂಪನಿಗಳ ಉದ್ಯೋಗಕ್ಕೆ ಕನ್ನಡಿಗರನ್ನು ಸಜ್ಜುಗೊಳಿಸುವ ಯೋಜನೆ; ಸಚಿವ ಪ್ರಿಯಾಂಕ್ ಖರ್ಗೆ ಸಭೆ